ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಹಾಯ್ದು ಹೋಗುವ ರಸ್ತೆ ಬದಿಯ ಕಾಲುವೆಗೆ ಆಯ ತಪ್ಪಿ ಬಿದ್ದಿದ್ದ ಮಾಜಿ ಸೈನಿಕರೊಬ್ಬನ್ನು ಅಗ್ನಿಶಾಮಕ ದಳದ ಸಿಬಂದಿ ಹರಸಾಹಸ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನಾಲೆಗೆ ಬಿದ್ದ ಮಾಜಿ ಸೈನಿಕ ಮಲ್ಲಿಕಾರ್ಜುನ್ ಮಾಡಿಯಾಳು ಎಂದು ಗುರುತಿಸಲಾಗಿದೆ. ಇವರು ಸಂಜೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿಗೆ ಬಂದ ವಾಹನಕ್ಕೆ ದಾರಿ ನೀಡಲು ಹೋಗಿ ಆಯತಪ್ಪಿ ಕಾಲುವೆಯೊಳಗೆ ಬಿದ್ದಿದ್ದರು. ಕಳೆದ 2-3ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕಾಲುವೆಯಲ್ಲಿ ನೀರು ರಭಸದಿಂದ ಹರಿಯುತ್ತಿತ್ತು. ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ನಾಲೆಯಲ್ಲಿ ಹದಿನೈದು ಅಡಿ ದೂರ ಹೋಗಿದ್ದರು.
ಅದೃಷ್ಟವಶಾತ್ ಅವರು ನಾಲೆಗೆ ಬಿದ್ದ ಸ್ಥಳ ಅಗ್ನಿಶಾಮಕ ದಳದ ಮುಖ್ಯ ಕಚೇರಿಯ ಮುಂಭಾಗದಲ್ಲಿ ಆಗಿತ್ತು. ಇದರಿಂದಾಗಿ ಕೂಡಲೇ ಅಗ್ನಿಶಾಮಕ ದಳದ ಸಿಬಂದಿ ರಕ್ಷಣೆಗೆ ಧಾವಿಸಿದರು. ಹಗ್ಗಗಳ ಸಹಾಯದಿಂದ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿಸಿಬಂದಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪರಶುರಾಮ್ ಅವರ ನೇತೃತ್ವದಲ್ಲಿ ಸುಮಾರು 1ಗಂಟೆಗಳ ಕಾಲ ಈ ರಕ್ಷಣಾ ಕಾರ್ಯ ನಡೆದಿದೆ.
ಸಿಬಂದಿಗಳಾದ ಮಲ್ಲಿಕಾರ್ಜುನ ತಳವಾರ, ಮೋತಿಲಾಲ್ ಪತಂಗೆ, ನಯೀಮ್, ಭೀಮಯ್ಯ, ಫಾರೂಕ್ ಅಲಿ ಮತ್ತು ವಿನೋದ್ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿ ನಿವೃತ್ತ ಸೈನಿಕರನ್ನು ರಕ್ಷಣೆ ಮಾಡಿದ್ದಾರೆ. ಈ ಕಾರ್ಯ ಸುತ್ತಲಿನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.