Advertisement

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್‌ ಜತೆ ಹೆಜ್ಜೆ ಹಾಕಿದ ನಟಿ ರಮ್ಯಾ

08:44 PM Oct 22, 2022 | Team Udayavani |

ಮಂಡ್ಯ: ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನದಿಂದ ಹೊರ ಬಂದಿದ್ದ ನಟಿ, ರಾಜಕಾರಣಿ ರಮ್ಯಾ ಅವರು ಶನಿವಾರ ರಾಯಚೂರಿನಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ರಮ್ಯಾ ಅವರು 2013ರ ಲೋಕಸಭೆ ಉಪಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ 2014ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಮನೆ ಖಾಲಿ ಮಾಡಿದ್ದ ರಮ್ಯಾ:
ರಾಹುಲ್‌ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದರು. ಅಲ್ಲದೆ, ಮಂಡ್ಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅವರು, ಮಂಡ್ಯದಲ್ಲೂ ಮನೆ ಮಾಡಿದ್ದರು. ಆದರೆ ಒಂದು ದಿನವೂ ಮನೆಯಲ್ಲಿ ವಾಸ್ತವ್ಯ ಹೂಡಿರಲಿಲ್ಲ. ರಾತ್ರೋ ರಾತ್ರಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು.

ಫೇಸ್‌ಬುಕ್‌ನಲ್ಲಿ ಆ್ಯಕ್ಟೀವ್‌:
ಕೆಲವು ದಿನಗಳ ಬಳಿಕ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸ್ಥಾನ ಬಿಟ್ಟ ನಂತರ ಐದಾರು ವರ್ಷಗಳಿಂದ ಪಕ್ಷದಿಂದಲೇ ದೂರವಾಗಿದ್ದರು. ನಂತರ ಸ್ವಲ್ಪ ದಿನಗಳ ಬಳಿಕ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅಲ್ಲಿಂದ ಇಲ್ಲಿಯವರೆಗೂ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದರು.

ಪಾದಯಾತ್ರೆಯಲ್ಲಿ ಪ್ರತ್ಯಕ್ಷ:
ಆದರೆ ಇದುವರೆಗೂ ರಮ್ಯಾ ಅವರು ಕಾಂಗ್ರೆಸ್‌ ಸಂಪರ್ಕಕ್ಕೆ ಬಂದಿರಲಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೇ ಬಿಜೆಪಿ ಸರ್ಕಾರದ ಕೆಲವು ನಿರ್ಧಾರಗಳನ್ನು ಖಂಡಿಸುತ್ತಾ ಬಂದಿದ್ದು, ಕೆಲವು ದಿನಗಳು ಮೌನವಾಗಿದ್ದರು. ಈಗ ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Advertisement

ಡಿ.ಕೆ.ಶಿವಕುಮಾರ್‌ ಸಂಧಾನ?:
ರಾಜಕೀಯ ಗುರುವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಮ್ಯಾ ಅವರ ಮನವೊಲಿಸಿದ್ದರು. ಅದರಂತೆ ರಮ್ಯಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈಗ ಮತ್ತೆ ರಮ್ಯಾ ಅವರನ್ನು ಪಾದಯಾತ್ರೆಗೆ ಕರೆತರುವ ಮೂಲಕ ರಾಹುಲ್‌ಗಾಂ ಧಿ ಹಾಗೂ ರಮ್ಯಾ ಮುನಿಸನ್ನು ಶಮನಗೊಳಿಸಿದ್ದಾರೆಂಬ ಚರ್ಚೆಗಳು ನಡೆಯುತ್ತಿವೆ.

ಮಂಡ್ಯ ಲೋಕಸಭೆ ಚುನಾವಣೆ ದಿಕ್ಸೂಚಿನಾ?
ರಮ್ಯಾ ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಮೊದಲ ಚಿತ್ರದಿಂದಲೇ ಸ್ಯಾಂಡಲ್‌ವುಡ್‌ಗೆ ಮರು ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈಗ ರಾಹುಲ್‌ಗಾಂ ಧಿ ಜತೆ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿರುವ ರಮ್ಯಾ ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಅಲ್ಲದೆ, ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರುತ್ತಾರೆಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಮ್ಯಾ, ಜೆಡಿಎಸ್‌ನಿಂದ ನಿಖೀಲ್‌ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ಸುಮಲತಾ ಅಂಬರೀಶ್‌ ಸ್ಪರ್ಧೆಗಿಳಿಯುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next