ಚಂಡೀಗಡ: ಇನ್ನು ಮುಂದೆ ಪಂಜಾಬ್‌ನಲ್ಲಿ ಮಾಜಿ ಶಾಸಕರು ಕೇವಲ ಒಂದು ಅವಧಿಯ ಶಾಸಕತ್ವಕ್ಕೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ!
ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರೇ ಇಂಥದ್ದೊಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಪ್ರತಿ ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ ಅವಧಿಗೂ ಪಿಂಚಣಿ ಪಡೆಯುವ ಅಭ್ಯಾಸಕ್ಕೆ ಮಾನ್ ಅಂತ್ಯಹಾಡಿದ್ದಾರೆ.
“ಪಂಜಾಬ್‌ನ ಮಾಜಿ ಶಾಸಕರು, ಅವರು 2 ಬಾರಿ ಗೆದ್ದಿದ್ದರೂ, 5 ಬಾರಿ ಅಥವಾ 10 ಬಾರಿ ಗೆದ್ದಿದ್ದರೂ ಇನ್ನು ಮುಂದೆ ಒಂದು ಅವಧಿಯ ಪಿಂಚಣಿಯನ್ನು ಮಾತ್ರ ಪಡೆಯಲಿದ್ದಾರೆ. ಇದರಿಂದ ಉಳಿತಾಯವಾಗುವ ಮೊತ್ತವನ್ನು ಜನರ ಕಲ್ಯಾಣಕ್ಕಾಗಿ ಬಳಸಲಾಗುವುದು’ ಎಂದು ಮಾನ್ ಘೋಷಿಸಿದ್ದಾರೆ.
ಒಬ್ಬ ಶಾಸಕ ಪ್ರತಿ ಅವಧಿಗೆ 75 ಸಾವಿರ ರೂ. ಪಿಂಚಣಿ ಪಡೆಯುತ್ತಾರೆ. 3 ಬಾರಿ, 4- 5 ಬಾರಿ ಶಾಸಕರಾಗಿ ಚುನಾಯಿತರಾದವರು, ನಂತರದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ, ಟಿಕೆಟ್ ಪಡೆಯದಿದ್ದರೂ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಕೆಲವರು ತಿಂಗಳಿಗೆ 3.50 ಲಕ್ಷ ರೂ., ಇನ್ನೂ ಕೆಲವರು 4.50 ಲಕ್ಷ ರೂ, ಮತ್ತೆ ಕೆಲವರು 5.25 ಲಕ್ಷ ರೂ. ಪಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಹೊರೆಯಾಗುತ್ತಿದೆ. ಹೀಗಾಗಿ, ಇನ್ನು ಮುಂದೆ ಒಂದು ಅವಧಿಯ ಶಾಸಕತ್ವದ ಪಿಂಚಣಿಯನ್ನು ಮಾತ್ರವೇ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ :ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಜಾಮೀನಿಗೆ ಸಿಬಿಐ ವಿರೋಧ
ಜತೆಗೆ, ಅವರ ಕೌಟುಂಬಿಕ ಪಿಂಚಣಿಯ ಮೊತ್ತವನ್ನೂ ಕಡಿತ ಮಾಡಲಾಗುವುದು ಎಂದೂ ಆಪ್ ನಾಯಕ, ಸಿಎಂ ಮಾನ್ ಹೇಳಿದ್ದಾರೆ.