Advertisement
ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಬಂಧಿತರು. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್ ತಮ್ಮ ತಂದೆಯನ್ನು ಈ ದಂಪತಿ ಬ್ಲ್ಯಾಕ್‌ವೆುàಲ್ ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಶನಿವಾರ ನಗರದ ಗರುಡಾ ಮಾಲ್ ಬಳಿ ಬಂಧಿಸಿದರು. ಬಳಿಕ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಬಳಿಕ ಕೋರಿಕೆ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಆರೋಪಿಗಳನ್ನು 8 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆರೋಪಿಗಳು ಮಾಲಿಕಯ್ಯ ಗುತ್ತೇದಾರ್ ತಮ್ಮನ್ನು ನಿಂದಿಸಿರುವ ಆಡಿಯೋ ಮತ್ತು ವೀಡಿಯೋಗಳ ಸಂಬಂಧ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿ ಇದನ್ನು ರಿತೇಶ್ ಗುತ್ತೆದಾರ್ ನಿರ್ಲಕ್ಷಿಸಿದ್ದರು. ಆದರೆ ಆರೋಪಿಗಳು ಅ. 23 ಹಾಗೂ 24ರಂದು ಪದೇ ಪದೆ ಕರೆ ಮಾಡಿ ಹಣ ನೀಡಿದರೆ ನಿಂದನೆ ಸಂದೇಶಗಳನ್ನು ಅಳಿಸುತ್ತೇವೆ. ಇಲ್ಲದಿದ್ದರೆ ಬಹಿರಂಗಪಡಿಸುವುದಾಗಿ ಬೆದರಿಸಿದ್ದರು. ಏನಿದು ಪ್ರಕರಣ?
ಅ. 21ರಂದು ರಿತೇಶ್ ಗುತ್ತೇದಾರ್‌ಗೆ ಕರೆ ಮಾಡಿದ್ದ ಆರೋಪಿ ಮಂಜುಳಾ, ತಾನು ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದಳು. ನಿಮ್ಮ ತಂದೆ ಮಾಲಿಕಯ್ಯ ಗುತ್ತೇದಾರ್ ತನಗೆ ನಿಂದನೆಯ ಸಂದೇಶ ಕಳುಹಿಸುತ್ತಿದ್ದಾರೆ. ಈ ಸಂಬಂಧ ತುರ್ತಾಗಿ ನಿಮ್ಮೊಂದಿಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದಳು. ಅನಂತರ ನಗರದ ಕೊಡಿಗೇಹಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಆರೋಪಿಗಳು ರಿತೇಶ್ ಅವರನ್ನು ಭೇಟಿ ಮಾಡಿದ್ದರು ಎಂದು ರಿತೇಶ್ ಗುತ್ತೇದಾರ್ ದೂರಿನಲ್ಲಿ ತಿಳಿಸಿದ್ದಾರೆ.