ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿಯಿಂದ ನೀರು ಗ್ರಾಮದಲ್ಲಿ ತಂದೇಬಿಟ್ಟವು ಎಂದು ವಿಜಯೋತ್ಸವ ಆಚರಿಸಿದ್ದ ಬಿಜೆಪಿ ನಾಯಕರು ಕಾಮಗಾರಿ ಆರಂಭಿಸದೆ ರೈತರಿಗೆ ಮೋಸ ಮಾಡಿದ್ದು, ಯೋಜನೆ ಬಗ್ಗೆ ರಾಜ್ಯ ಸರಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ ಜೋಶಿ ಅವರುಗಳು ಸುಳ್ಳು ಹೇಳಿ ಉತ್ತರ ಕರ್ನಾಟಕದ ರೈತರು, ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಡಿಪಿಆರ್ ಗೆ ಒಪ್ಪಿಗೆ ಎಂದು ಕೇಂದ್ರ ಸಚಿವ ಜೋಶಿಯವರು ದಿನಾಂಕವೇ ಇಲ್ಲದ ಕಾಗದ ತೋರಿಸಿದಾಗ ನಾವು ಆಕ್ಷೇಪಿಸಿದ್ದೆವು. ಸಿದ್ದರಾಮಯ್ಯ ಹಾಗೂ ನನ್ನ ವಿರುದ್ದ ಅವಮಾನಕರ ರೀತಿಯಲ್ಲಿ ಹೇಳಿಕೆ ನೀಡಿದ್ದ ಜೋಶಿಯವರೇ ಎಲ್ಲಿ ಹೋಯಿತು ನಿಮ್ಮ ಪೌರುಷ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಸಾ-ಬಂಡೂರಿ ಹುಟ್ಟು ಹಾಕಿದ್ದೆ ನಾನು, ಕಾಂಗ್ರೆಸ್ ಗೆ ಅದರ ಶ್ರೇಯಸ್ಸು ಸೇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹದಾಯಿ ನಮ್ಮ ಕೊಡುಗೆ ಎಂದು ಎದೆತಟ್ಟಿಕೊಂಡಿದ್ದರು ನಿಮ್ಮ ಎದೆಗಾರಿಕೆ ಎಲ್ಲಿ ಹೋಯಿತು ಶಾರವರೆ ಎಂದು ವ್ಯಂಗ್ಯ ವಾಡಿದರು.
ಕಳಸಾ-ಬಂಡೂರಿ ಯೋಜನೆಗೆ ಅರಣ್ಯ ಅನುಮೋದನೆಯ ಪ್ರಾದೇಶಿಕ ಅರಣ್ಯ-ಪರಿಸರ ಕಮಿಟಿನಲ್ಲಿ ಬಿಜೆಪಿಯವರೆ ಇದ್ದರೂ, ಅನುಮೋದನೆ ನೀಡಿಲ್ಲ. ಗಣಿಗಾರಿಕೆ ಅನುಮತಿಗೆ ವಿಶೇಷ ಸಭೆ ಕರೆಯುವ ಕಮಿಟಿ ನೀರಿನ ವಿಷಯದಲ್ಲಿ ವಿಶೇಷ ಸಭೆ ಕರೆದಿಲ್ಲ. ಗಣಿಗಾರಿಕೆ ಸಂಬಂಧ ಕಮಿಟಿ ವಿಶೇಷ ಸಭೆ ತಡೆಯಬೇಕು, ನೀಡಿದ ಪರವಾನಿಗೆಗಳನ್ನು ರದ್ದುಪಡಿಸಬೇಕು ಎಂದು ಚುನಾವಣಾ ಆಯೋಗವನ್ನು ಎಚ್.ಕೆ.ಪಾಟೀಲ ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯೋಜನೆ, ಉತ್ತರ ಕರ್ನಾಟಕ ರೈತರ ಕಳಕಳಿ ಇದ್ದರೆ ಕೂಡಲೇ ಅರಣ್ಯ ಕಮಿಟಿ ಒಪ್ಪಿಗೆ ಪಡೆದು, ಕಾಮಗಾರಿ ಆರಂಭಕ್ಕೆ ಬೇಕಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.