ಮಹಾರಾಷ್ಟ್ರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ,
ಇದರೊಂದಿಗೆ ಲೋಕಸಭೆ ಚುನಾವಣೆಗೆ ತಿಂಗಳುಗಳ ಮೊದಲೇ ವಿರೋಧ ಪಕ್ಷದ ಮೈತ್ರಿ ಇಂಡಿಯಾ ಬ್ಲಾಕ್‌ಗೆ ಮತ್ತೊಂದು ಹಿನ್ನಡೆಯಾದಂತಾಗಿದೆ.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, “ನಾನು 12/02/2024 ರಂದು ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಈಗಾಗಲೇ ಚವಾಣ್ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಹೇಳಿಕೆ ನೀಡಿದ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ “ಅಶೋಕ್ ಚವಾಣ್ ಬಗ್ಗೆ ನಾನು ಮಾಧ್ಯಮಗಳಿಂದ ಕೇಳಿದ್ದೇನೆ. ಆದರೆ ನಾನು ಈಗ ಹೇಳಬಲ್ಲ ಏಕೈಕ ವಿಷಯವೆಂದರೆ ಕಾಂಗ್ರೆಸ್‌ನ ಹಲವಾರು ಉತ್ತಮ ನಾಯಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ ಹಿರಿಯ ನಾಯಕರಿಗೆ ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಇದೆ. ನನಗೆ ವಿಶ್ವಾಸವಿದೆ ಮುಂದಿನ ದಿನಗಳಲ್ಲಿ ಕೆಲವು ಕಾಂಗ್ರೆಸ್ ನ ಹಿರಿಯ ನಾಯಕರು ಬಿಜೆಪಿ ಸೇರಲಿದ್ದಾರೆ. ಆಗೇ ಆಗೇ ದೇಖಿಯೇ ಹೋತಾ ಹೈ ಕ್ಯಾ, (ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ)” ಎಂದು ಅವರು ಹೇಳಿದರು.
ಇದನ್ನೂ ಓದಿ: Video:ಪೆಟ್ರೋಲ್ ಖಾಲಿಯಾದರೂ ಬೈಕ್ ಟ್ಯಾಕ್ಸಿಯಿಂದ ಇಳಿಯದ ಗ್ರಾಹಕ: ದೂಡಿಕೊಂಡು ಸಾಗಿದ ಚಾಲಕ