ಬೆಂಗಳೂರು: ಕನ್ನಡದ ಖ್ಯಾತ ನಟ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವಿನ ಹಿಂದಿ ಭಾಷೆಯ ಕುರಿತ ಟ್ವೀಟ್ ಸಮರಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಹಿಂದಿ ಯಾವತ್ತೂ ಭಾರತದ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ. ಇದು ಅಜಯ್ ದೇವಗನ್ ಮತ್ತು ಸುದೀಪ್ ನಡುವಿನ ವಾಕ್ಸಮರವಾಗಿದೆ. ಆದರೆ ನಾನೊಬ್ಬ ಕನ್ನಡಿಗ ಎಂಬ ಹೆಮ್ಮೆಯಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
“ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ಬಗ್ಗೆ ಜನರು ಹೆಮ್ಮೆ ಪಡುತ್ತಾರೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಏನಿದು ಟ್ವೀಟ್ ಸಮರ:
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದ ನಟ ಅಜಯ್ ದೇವಗನ್, “ಸಹೋದರ ನಿಮ್ಮ ಹೇಳಿಕೆ ಪ್ರಕಾರ ಹಿಂದ ನಮ್ಮ ರಾಷ್ಟ್ರ ಭಾಷೆ ಅಲ್ಲ. ಹಾಗಿದ್ದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನೇಕೆ ಹಿಂದಿಗೆ ಡಬ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿದೆ. ಇಂದು ಮತ್ತು ಎಂದೆಂದಿಗೂ ಜನಗಣ ಮನ” ಎಂದು ಸುದೀಪ್ ಅವರ ಕಾಲೆಳೆದಿದ್ದರು.
Related Articles
ಸುದೀಪ್ ತಿರುಗೇಟು:
ಅಜಯ್ ದೇವಗನ್ ಅವರ ಟ್ವೀಟ್ ಗೆ ಮರುಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನಾನು ದೇಶದ ಪ್ರತಿಯೊಂದು ಭಾಷೆಯನ್ನು ಗೌರವಿಸುತ್ತೇನೆ. ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದಿರುವ ನನ್ನ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ. ಆದರೆ ಆ ಸಾಲುಗಳನ್ನು ನಾನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎಂಬುದು ಮುಖ್ಯವಾಗುತ್ತದೆ. ನಾನು ಈ ಮಾತುಗಳನ್ನು ಯಾವ ಅರ್ಥದಲ್ಲಿ ಹೇಳಿದ್ದೇನೆ ಎಂಬುದನ್ನು ಖುದ್ದಾಗಿ ನಿಮ್ಮನ್ನು ಭೇಟಿ ಮಾಡುವಾಗ ವಿವರಿಸುತ್ತೇನೆ. ನಾನು ಯಾರನ್ನೂ ನೋಯಿಸಲು ಅಥವಾ ಪ್ರಚೋದಿಸಲು ಈ ಹೇಳಿಕೆ ನೀಡಿಲ್ಲ. ನೀವು ಹಿಂದಿಯಲ್ಲಿ ಕಳುಹಿಸಿರುವ ಸಂದೇಶ ನನಗೆ ಅರ್ಥವಾಯಿತು” ಎಂದು ಪ್ರತ್ಯುತ್ತರ ಕೊಟ್ಟಿದ್ದರು.