ಕಲಬುರಗಿ: ಭೂಕಂಪನದ ಆತಂಕದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಧೈರ್ಯ ತುಂಬಲು ಹಾಗೂ ಆಹವಾಲು ಆಲಿಸಿ ಜನತೆಯನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಭೂಕಂಪನವಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಹಾಗೂ ಸುತ್ತ ಮುತ್ತ ಗ್ರಾಮ ಭೂಕಂಪನವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ನಿರ್ಮಾಣದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಗಡಿಕೇಶ್ವಾರ ಗ್ರಾಮಕ್ಕೆ ಸಿದ್ದರಾಮಯ್ಯ ತೆರಳಿದ್ದು, ಜನರ ಅಹವಾಲು ಅಲಿಸಿ ಮಾತನಾಡುವಾಗಲೇ ಸಿದ್ದರಾಮಯ್ಯ ಅವರಿಗೆ ಭೂಕಂಪನದ ಅನುಭವ ಉಂಟಾಯಿತು.
ಭೂಕಂಪದಿಂದ ಆತಂಕಕ್ಕೆ ಒಳಗಾಗಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಿದ್ದರಾಮಯ್ಯ ಅವರು ಗ್ರಾಮಸ್ಥರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಯಿತು.
ಭೂಕಂಪದಿಂದ ಅನೇಕ ಮನೆಗಳು ಕುಸಿದಿವೆ. ಇದರಿಂದ ಹೆದರಿರುವ ಗ್ರಾಮಸ್ಥರು ಊರು ತೊರೆದಿದ್ದಾರೆ. ಮನೆಗಳನ್ನು ಕಳೆದುಕೊಂಡವರು ನಿರಾಶ್ರಿತರಾಗಿದ್ದಾರೆ. ಸ್ಥಳದಿಂದಲೇ ಕಂದಾಯ ಸಚಿವ ಅಶೋಕ್ ಅವರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ ಅವರು ಪರಿಹಾರ ಕಾರ್ಯವನ್ನು ತುರ್ತಾಗಿ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಜಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಸೇರಿದಂತೆ ಮುಂತಾದವರು ಹಾಜರಿದ್ದರು.