Advertisement

ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಬೊಮ್ಮಾಯಿ ಮುಂದುವರಿಸಲೇಬೇಕಾಗಿದೆ : ಸಿದ್ದರಾಮಯ್ಯ

03:00 PM Aug 02, 2021 | Team Udayavani |

ಕಲಘಟಗಿ: ಬಳ್ಳಾರಿ ಹಾಗೂ ಈ ಭಾಗಗಳಲ್ಲಿನ ಬಡವರ ಹಾಗೂ ಶೋಷಿತರ ಪರವಾಗಿ ಸರಕಾರ ಮಾಡಬೇಕಾದ ಕೆಲಸ- ಕಾರ್ಯಗಳನ್ನು ಸ್ವಂತ ಹಣದಿಂದ ಮಾಡುತ್ತ ಜನಪ್ರಿಯತೆ ಹೊಂದಿರುವ ಸಂತೋಷ ಲಾಡ್‌ ತನಗೆ ಆಪ್ತಮಿತ್ರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಉತ್ತರ ಕನ್ನಡ ಜಿಲ್ಲೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ರವಿವಾರ ಸಂಜೆ ತೆರಳುವ ಮಾರ್ಗಮಧ್ಯೆ ಸಂತೋಷ ಲಾಡ್‌ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದರು. ಲಾಡ್‌ ಹೇಗೆ ಚುನಾವಣೆಯಲ್ಲಿ ಸೋತ ಎಂಬುದು ಪ್ರಶ್ನಾರ್ಥಕವಾಗಿದೆ. ಲಾಡ್‌ನ‌ ಜಾತಿ ಬಡವರ ಜಾತಿ. ಸ್ವಂತ ಹಣದಿಂದ ಮತಕ್ಷೇತ್ರದ ಕಲಘಟಗಿ ಮತ್ತು ಅಳ್ನಾವರದಲ್ಲಿ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಮನೆ ಮನೆಗೆ ಉಚಿತವಾಗಿ ಅಕ್ಕಿ ನೀಡಿರುವುದಲ್ಲದೇ ಉಚಿತವಾಗಿ ಊಟ-ಉಪಾಹಾರ ನೀಡುವ ಕ್ಯಾಂಟೀನ್‌ ಆರಂಭಿಸಿದ್ದಾನೆ. ಉಚಿತ ಕೊಳವೆ ಬಾವಿ, ಉಚಿತ ಮದುವೆ ಮಾಡಿ ಜನಾನುರಾಗಿಯಾಗಿದ್ದಾನೆ ಎಂದರು.

ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಟಿಕೆಟ್‌ ಲಾಡ್‌ ಅವರಿಗೆ ನೀಡಬೇಕು ಎಂಬ ಕಾರ್ಯಕರ್ತರ ಘೋಷಣೆಗೆ ಉತ್ತರಿಸಿದ ಅವರು, ನಾವು ಯಾವುದೇ ಕ್ಷೇತ್ರದಲ್ಲಿಯೂ ಮುಂದಿನ ಅಭ್ಯರ್ಥಿ ಹೆಸರನ್ನು ಘೋಷಿಸಬಾರದೆಂದು ನಿರ್ಧರಿಸಿದ್ದೇವೆ. ಆದರೆ ಲಾಡ್‌ ರಾಜ್ಯದ ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರು ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.

ಯಡಿಯೂರಪ್ಪನವರು ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಮುಖ್ಯಮಂತ್ರಿ ಯಾಗಿದ್ದಾರೆ. ಆದರೆ ಪಾಪ ಅವರ ಪಕ್ಷದವರು ಬಲಾತ್ಕಾರದಿಂದ ಅವರನ್ನು ಮನೆಗೆ ಕಳಿಸಿದ್ದಾರೆ. ಬೊಮ್ಮಾಯಿಯವರು ಯಡಿಯೂರಪ್ಪನವರ ಕೃಪೆಯಿಂದಲೇ ಸಿಎಂ ಆಗಿದ್ದು, ಅದರ ಮರ್ಜಿಗಾಗಿ ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಮುಂದುವರಿಸಲೇಬೇಕಾಗಿದೆ ಎಂದರು.

ಸಿದ್ದರಾಮಯ್ಯನವರು ಲಾಡ್‌ ಅವರ ಮನೆಗೆ ಬರುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕಲಘಟಗಿ ಮತ್ತು ಅಳ್ನಾವರ ಭಾಗದಿಂದ ಸಹಸ್ರಾರು ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಸಿದ್ದರಾಮಯ್ಯನವರು ಬರುತ್ತಿದ್ದಂತೆಯೇ ಅವರಿಗೆ ಹೂಮಳೆಯಿಂದ ಭವ್ಯವಾದ ಸ್ವಾಗತ ನೀಡಲಾಯಿತು. ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ದೇವಕಿ ಯೋಗಾನಂದ, ಅನಿಲಕುಮಾರ ಪಾಟೀಲ, ಅಲ್ತಾಫ ಕಿತ್ತೂರ, ರಾಜಶೇಖರ ಮೆಣಸಿನಕಾಯಿ, ಮಂಜುನಾಥಗೌಡ ಮುರಳ್ಳಿ, ಕುಮಾರ ಖಂಡೇಕರ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next