Advertisement

ಬೊಮ್ಮಾಯಿ ಅವರನ್ನು ನಾವೇನು ರಬ್ಬರ್‌ ಸ್ಟ್ಯಾಂಪ್‌ ಎಂದಿಲ್ಲ: ಸಿದ್ದರಾಮಯ್ಯ

01:48 PM Jul 31, 2021 | Team Udayavani |

ಹುಬ್ಬಳ್ಳಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾವೇನು ರಬ್ಬರ್‌ ಸ್ಟ್ಯಾಂಪ್‌ ಎಂದು ಹೇಳಿಲ್ಲ. ಅವರಷ್ಟಕ್ಕೆ ಅವರು ನಾನು ರಬ್ಬರ್‌ ಸ್ಟ್ಯಾಂಪ್‌ ಅಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಅರ್ಥ ಏನೆಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಬ್ಬರ್‌ ಸ್ಟ್ಯಾಂಪ್‌ ಅಲ್ಲ. ಪುನಃ ಹೀಗೆನ್ನಬೇಡಿ ಎಂದು ಬೊಮ್ಮಾಯಿ ಅವರೇ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ದೆಹಲಿಗೆ ಹೋಗಿರುವುದು ಹೈಕಮಾಂಡ್‌ ಆಶೀರ್ವಾದ ತೆಗೆದುಕೊಳ್ಳಲು ಎನ್ನುವುದಾದರೆ ರಾಜ್ಯದಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಕೇಂದ್ರದ ಅನುದಾನ ಕೇಳುವವರು ಯಾರು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪ್ರವಾಹದಿಂದಾಗಿ ಜನರು ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಓಡಾಡುತ್ತಿದ್ದಾರೆ. ಜನಹಿತ ಸಂಪೂರ್ಣ ಮರೆತಿದ್ದಾರೆ. ಮುಖ್ಯಮಂತ್ರಿ ಕಾಟಾಚಾರಕ್ಕೆ ಉತ್ತರ ಕನ್ನಡ ಜಿಲ್ಲಾ ಪ್ರವಾಹ ವೀಕ್ಷಣೆ ಮಾಡಿದ್ದಾರೆ. ಪ್ರವಾಹ ಬೆಳಗಾವಿ, ಬಾಗಲಕೋಟೆ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಿದೆ. ಮುಖ್ಯಮಂತ್ರಿಯಾದವರು ಇತರೆ ಜಿಲ್ಲೆಗಳಿಗೆ ಹೋಗಬೇಕಾಗಿತ್ತು. ಆದರೆ ಒಂದೇ ಜಿಲ್ಲೆಗೆ ಹೋಗಿ ಜನರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಲ್ಲ, ಮಂತ್ರಿಗಳಿಲ್ಲ. ಹೀಗಾಗಿರುವಾಗ ಪ್ರವಾಹದಂತಹ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವವರು ಯಾರು. ಬಿಜೆಪಿಯವರಿಗೆ ಜನರ ಹಿತ ಬೇಕಾಗಿಲ್ಲ. ಅಧಿಕಾರ, ಭ್ರಷ್ಟಾಚಾರವೇ ಇವರ ಮುಖ್ಯ ಕಸುಬಾಗಿದೆ ಎಂದರು.

ಸಿಎಂ ಬದಲಾವಣೆ ಮಾಡುತ್ತಿದ್ದಂತೆ ಭ್ರಷ್ಟಾಚಾರ ತೊಲಗಿ ಪಾರದರ್ಶಕತೆ ಬರುತ್ತದೆಯೇ. ಇಂದಿನ ಮುಖ್ಯಮಂತ್ರಿ ಹಿಂದಿನ ಭ್ರಷ್ಟಾಚಾರ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ವ್ಯಕ್ತಿ ಬದಲಾವಣೆಯಾಗಿದೆ ವಿನಃ ಭ್ರಷ್ಟಾಚಾರ ಮುಂದುವರಿಯಲಿದೆ. ಸಿದ್ದರಾಮಯ್ಯಗೆ ವಯಸ್ಸಾಗಿಲ್ಲ. ಶಾಂತಿಯಿಂದ ವರ್ತಿಸುತ್ತಿದ್ದೇನೆ. ಸಂಯಮ ಕಳೆದುಕೊಂಡಿಲ್ಲ ಎಂದು ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರಷ್ಟು ವಯಸ್ಸು ನನಗೆ ಆಗಿಲ್ಲ. ಹೀಗಾಗಿ ನಾನು ಶಾಂತಿಯಿಂದ ಇದ್ದೇನೆ ಎಂದರು.

ಬೊಮ್ಮಾಯಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಎಂ ಆಗಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಬೆಳೆ ಪರಿಹಾರ, ನೆರೆ ಪರಿಹಾರ ಘೋಷಣೆ ಮಾಡಿ ಮೂರು ವರ್ಷ ಕಳೆದರೂ ಮನೆ, ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಬಂದಿಲ್ಲ. ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ಪಡೆದುಕೊಳ್ಳಬೇಕು. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಇಂತಹ ಸರ್ಕಾರದಿಂದ ಜನರಿಗೆ ಯಾವ ಪ್ರಯೋಜನವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next