ಅಹ್ಮದಾಬಾದ್ : 2010ರಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಅವರ ಕೊಲೆ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದ ದೀನೂ ಸೋಳಂಕಿ ಮತ್ತು ಇತರ ಆರು ಮಂದಿಯನ್ನು ದೋಷಿಗಳೆಂದು ವಿಶೇಷ ಸಿಬಿಐ ನ್ಯಾಯಾಲಯ ಇಂದು ಶನಿವಾರ ಘೋಷಿಸಿದೆ.
ಆರ್‌ಟಿಐ ಕಾರ್ಯಕರ್ತ ಜೇತ್ವಾ ಅವರು ಗಿರ್ ಅರಣ್ಯದಲ್ಲಿ ಈ ವ್ಯಕ್ತಿಗಳು ಕಾನೂನು ಬಾಹಿರ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದರು.
ವಿಶೇಷ ಸಿಬಿಐ ನ್ಯಾಯಾದೀಶ್ ಕೆ ಎಂ ದವೆ ಅವರು ಇದೇ ಜು.11ರಂದು ಶಿಕ್ಷೆಯ ತೀರ್ಪನ್ನು ಪ್ರಕಟಿಸಲಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಗುಜರಾತ್ ಹೈಕೋರ್ಟ್ ಸಿಬಿಗೆ ಒಪ್ಪಿಸಿತ್ತು. ಇದಕ್ಕೆ ಮೊದಲು ರಾಜ್ಯದ ಅಪರಾಧ ಪತ್ತೆ ದಳವು ಮಾಜಿ ಬಿಜೆಪಿ ಸಂಸದ ಸೋಳಂಕಿಗೆ ಕ್ಲೀನ್ ಚಿಟ್ ನೀಡಿತ್ತು.
ಸೋಳಂಕಿ ಅವರು 2009ರಿಂದ 2014ರ ಅವಧಿಯಲ್ಲಿ ಗುಜರಾತ್‌ನ ಜುನಾಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಇವರ ಸೋದರ ಸಂಬಂಧಿ ಶಿವ ಸೋಳಂಕಿ ಮತ್ತು ಇತರ ಐವರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಸಂಚಿನ ಆರೋಪವನ್ನು ಹೊರಿಸಲಾಗಿತ್ತು. ಆರ್‌ಟಿಐ ಕಾರ್ಯಕರ್ತ ಜೇತ್ವಾ ಅವರನ್ನು ಗುಜರಾತ್ ಹೈಕೋರ್ಟ್ ಹೊರಗಡೆ 2010ರ ಜು.20ರಂದು ಗುಂಡಿಟ್ಟು ಕೊಲ್ಲಲಾಗಿತ್ತು.