ಪಣಜಿ: ಮಾಜಿ ಸಿಎಂ ಮನೋಹರ್ ಪರಿಕ್ಕರ್ ನಿಧನದ ಬಳಿಕ ಗೋವಾದಲ್ಲಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುವ ಮೂಲಕ ನಾವು ರಾಜಕೀಯವಾಗಿ ದೊಡ್ಡ ತಪ್ಪು ಮಾಡಿದೆವು.
ಇದಕ್ಕಾಗಿ ಗೋವಾ ಜನರ ಬಳಿ ಕ್ಷಮೆ ಕೋರುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ಗೋವಾ ಫಾರ್ವರ್ಡ್ ಪಾರ್ಟಿ (ಜಿ.ಎಫ್.ಪಿ.) ಮುಖ್ಯಸ್ಥರೂ ಆಗಿರುವ ಸರ್ದೇಸಾಯಿ, ‘ರಾಜ್ಯದಲ್ಲಿ ಬಿಜೆಪಿ ಸರಕಾರ ಅಸಮರ್ಥವಾಗಿದ್ದು, ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಹೊಂದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಸರಕಾರವನ್ನು ಅಸ್ತಿತ್ವಕ್ಕೆ ತರುವುದಿಲ್ಲ.
ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಅತಂತ್ರ ಫಲಿತಾಂಶ ಸೃಷ್ಟಿಯಾಗಿದ್ದರಿಂದ ಬಿ.ಎಫ್.ಪಿ. ಸೇರಿದಂತೆ ಮತ್ತಿತರರ ಬೆಂಬಲ ಪಡೆದು ಬಿಜೆಪಿ ಸರಕಾರ ರಚಿಸಿತ್ತು.
ಕಳೆದ ಜುಲೈನಲ್ಲಿ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ ಸರದೇಸಾಯಿ ಸೇರಿದಂತೆ ಬಿ.ಎಫ್.ಪಿ.ಯ ಇಬ್ಬರು ಶಾಸಕರನ್ನು ಸಂಪುಟದಿಂದ ಕೈಬಿಡಲಾಗಿತ್ತು.