ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಟಿಡಿಪಿ ಶಾಸಕ ರಘು ರಾಮ ಕೃಷ್ಣಂ ರಾಜು ಅವರು ನೀಡಿದ ದೂರಿನ ಆಧಾರದ ಮೇಲೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ, ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ.ವಿ.ಸುನಿಲ್ ಕುಮಾರ್, ಪಿಎಸ್‌ಆರ್ ಸೀತಾರಾಮಾಂಜನೇಯಲು, ನಿವೃತ್ತ ಪೊಲೀಸ್ ಅಧಿಕಾರಿ ಆರ್.ವಿಜಯ್ ಪಾಲ್ ಮತ್ತು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯ ಮಾಜಿ ಅಧೀಕ್ಷಕಿ ಜಿ.ಪ್ರಭಾವತಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕೆ.ರಘುರಾಮ ಕೃಷ್ಣಂ ರಾಜು ಅವರು ನೀಡಿದ ದೂರಿನಲ್ಲಿ 2021 ರಲ್ಲಿ ನರಸಪುರಂ ಸಂಸದರಾಗಿದ್ದ ಸಂದರ್ಭ ವಿನಾ ಕಾರಣ ನನ್ನನ್ನು ಪೊಲೀಸ್ ವಾಹನದೊಳಗೆ ಕೂಡಿಹಾಕಿ ಅದೇ ದಿನ ಗುಂಟೂರಿಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಅಲ್ಲದೆ ಪಿವಿ ಸುನೀಲ್ ಕುಮಾರ್, ಪಿಎಸ್ಆರ್ ಆಂಜನೇಯುಲು ಮತ್ತು ಇತರ ಪೊಲೀಸ್ ಅಧಿಕಾರಿಗಳು ಬೆಲ್ಟ್ ಮತ್ತು ದೊಣ್ಣೆಗಳಿಂದ ನನ್ನನ್ನು ಥಳಿಸಿ ಬೆದರಿಕೆ ಕೂಡ ಹಾಕಿದ್ದರು. ಗಂಭೀರ ಹಲ್ಲೆ ನಡೆಸಿದ ನನ್ನನ್ನು ಬಳಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು ಈ ವೇಳೆ ಅಲ್ಲಿಯ ವೈದ್ಯೆಯಾಗಿದ್ದ ಪ್ರಭಾವತಿ ಅವರು ಕಳಪೆ ಚಿಕೆತ್ಸೆ ನೀಡಿದ್ದರು ಎಂದು ದೂರಿದ್ದಾರೆ.
ಈ ಘಟನೆ ನಡೆದ ಸಂದರ್ಭ ಪಾಲ್ ಸಿಐಡಿ ಎಎಸ್ಪಿಯಾಗಿದ್ದರು ಮತ್ತು ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು.
ಕೃಷ್ಣಂ ರಾಜು ದೂರಿನ ಮೇಲೆ ಗುಂಟೂರು ಪೊಲೀಸರು ಐವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 166, 167, 197, 307, 326, 465 ಮತ್ತು 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.