ಬೆಂಗಳೂರು:ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕಳೆದ 4 ವರ್ಷದಿಂದ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬುಧವಾರ(ಜನವರಿ 27, 2021) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪತ್ನಿ ದೂರವಾದಳೆಂದು 18 ಮಹಿಳೆಯರ ಸರಣಿ ಹತ್ಯೆ: ಪೊಲೀಸರಿಂದ ಆರೋಪಿಯ ಬಂಧನ
ಕೋವಿಡ್ ಸೋಂಕಿಗೆ ಒಳಗಾಗಿರುವ ಶಶಿಕಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೂಲಗಳು ಹೇಳಿವೆ. ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಪಿಟಿಐಗೆ ನೀಡಿರುವ ಮಾಹಿತಿ ಪ್ರಕಾರ, 63 ವರ್ಷದ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಎಲ್ಲಾ ಪ್ರಕ್ರಿಯೆಗಳನ್ನು ಆಸ್ಪತ್ರೆಯಲ್ಲಿಯೇ ಪೂರ್ಣಗೊಳಿಸಲಾಗುವುದು. ಆದರೆ ಆಸ್ಪತ್ರೆಯಿಂದ ಶಶಿಕಲಾ ಯಾವಾಗ ಡಿಸ್ ಚಾರ್ಜ್ ಆಗಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ವಿವರಿಸಿದೆ.
ಶಶಿಕಲಾ ಬಿಡುಗಡೆಯಾಗುವ ಮೊದಲೇ ಜನವರಿ 20ರಂದು ಶಶಿಕಲಾಗೆ ಕೋವಿಡ್ 19 ಸೋಂಕು ತಗುಲಿತ್ತು. ನಂತರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶಶಿಕಲಾ ಆರೋಗ್ಯ ಸ್ಥಿರವಾಗಿರುವುದಾಗಿ ಮಾಹಿತಿ ಲಭಿಸಿದೆ. ವೈದ್ಯರು ಕೂಡಾ ಅವರನ್ನು ಉತ್ತಮವಾಗಿ ನೋಡಿಕೊಂಡಿದ್ದು, ಚಿಕಿತ್ಸೆ ನೀಡಿದ್ದಾರೆ ಎಂದು ದಿನಕರನ್ ಕಳೆದ ವಾರ ತಿಳಿಸಿದ್ದರು.