Advertisement
“ಜೀವದ ವಿಕಾಸ ಪರಿಧಿಯ ಸುತ್ತ ಮೃತ್ಯುವಿನ ದಿಗ್ಬಂಧ’ ಎಂದು ಕವಿತೆ ಶುರುವಾಗುತ್ತದೆ. ಜೀವಕ್ಕೊಂದು ವಿಕಾಸ ಇದೆ. ನಿಜ. ಆದರೆ ಆ ವಿಕಾಸಕ್ಕೊಂದು ಪರಿಧಿ-ಎಲ್ಲೆ ಇದೆ. ಆ ಎಲ್ಲೆ ಎಂದರೆ ಅದು ಮೃತ್ಯುವೇ ಎನ್ನುತ್ತದೆ ಕವಿತೆ. ಈ ಹಿಂದೆ ನೀ ಬಳಿಯೊಳಿರುವಾಗ್ಗೆ ಕವಿತೆಯಲ್ಲಿ “ಪರಿಧಿ’ಯನ್ನು ಬೇರೆಯೇ ಒಂದು ರೀತಿಯಲ್ಲಿ ಕವಿ ನೋಡಿದ್ದರು. “ತ್ರಿಜ್ಯಗಳ ಅಸಂಖ್ಯಕ್ಕೆ ಗುರಿ-ಮುರಿ-ತಣಿವು ತರುವ ಪರಿಧಿಯ ಸಾಮತೇಜಸ್ಸು’ ಎಂದು ಅದ್ಭುತವಾಗಿ ಹೇಳಿದ್ದರು. ಈಗಲಾದರೋ, ಗುರಿ-ಮುರಿ-ತಣಿವು ಎನ್ನುವ ಪದಗಳಿಗೆ ಸಾವಿಗೆ ಸಂಬಂಧಿಸಿದ ಅರ್ಥಚ್ಛಾಯೆಗಳೂ ಹೊಳೆದು ಪರಿಧಿಗೆ ರುದ್ರತೇಜಸ್ಸು ಬಂದಿದೆ !
ಹೇಗೆಂದರೆ,
“”ಅನಂತಮುಖೀ ಅಂತರಂಗದ ಅನಿರ್ಬದ್ಧ ಸಂಚಾರದ ವಿರುದ್ಧ ಗಟ್ಟಿ ನಿಂತಿದೆ ನೆಲಕ್ಕಂಟಿ ಈ ಜಡ ಶರೀರ”
ಇದು ವಿರೋಧಾಭಾಸವಲ್ಲವೆ? ದ್ವಂದ್ವವೇ ಅಲ್ಲವೆ?- ಇಷ್ಟೇ ಅಲ್ಲ.
“”ಬದುಕು ಸಾವುಗಳು, ಸುಖ-ದುಃಖ, ಪ್ರೀತಿ-ದ್ವೇಷ- ಒಂದಲ್ಲ ಇನ್ನೊಂದು ಅಲ್ಲೋ ಇಲ್ಲೋ ತಕ್ಕಡಿಯ ಎರಡೂ ತಟ್ಟೆಯಲ್ಲಿ ಪರಸ್ಪರ ವಿರುದ್ಧ ದ್ವಂದ್ವಗಳು.
ಸರ್ವದಾ ತೂಗುತ್ತವೆ. ಒಂದು ಕೆಳಕೆಳಕ್ಕೆ ಇನ್ನೊಂದು ಮೇಲಕ್ಕೆ ಸರ್ವದಾ ತುಯ್ಯುತ್ತವೆ”
ದ್ವಂದ್ವಗಳ ಈ ಚಿತ್ರವನ್ನು ಪರಿಭಾವಿಸುತ್ತಲೇ ಕವಿಗೆ ಇನ್ನೊಂದು ಅಂಶವೂ ಹೊಳೆದಿದೆ: ದ್ವಂದ್ವವೆಂದಾಗ ಅದೇ; ತಕ್ಕಡಿಯ ಸಮತೂಕವೂ ಆಗಿ ಪರಿಣಮಿಸುವುದು ಎಂದು ಹೊಳೆದು, ದ್ವಂದ್ವವಿಲ್ಲದೆ ಸಮತೂಕವಿಲ್ಲ ಎಂದೂ ಹೊಳೆದು, ಆದುದರಿಂದಲೇ ಸಮತೂಕ-ಸಮತ್ವ ಎನ್ನುವುದು ದ್ವಂದ್ವದ ಸೃಜನಾತ್ಮಕ ರೂಪವೆಂದೂ ಹೊಳೆದು, ಸಮತೂಕವೆಂದರೆ ಎರಡರ ಮಟ್ಟವೂ ಒಂದೇ ಆಗುವುದು- ಹಾಗೆ ಆದಾಗಲೇ ಅದು ನಿಜವಾದ “ಸಮಾಧಾನ’ ಎಂದೂ ಹೊಳೆದು ಒಂದು ಕ್ಷಣ ತನಗೇ ದಿಗ್ಭ್ರಮೆಯಂಥ ಅಚ್ಚರಿಯಾಗಿದೆ ! ಹೀಗೆ ಅಚ್ಚರಿಯುಂಟುಮಾಡಿ ಕಂಗೆಡಿಸುವುದೇ ಹೊಳಹಿನ ಲಕ್ಷಣ !
ಮರುಕ್ಷಣ-ಇಲ್ಲಿ ಸಮತೂಕ-ಸಮಾಧಾನ ಎಂದಾದರೂ ಕಂಡಿದೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ, ಇಲ್ಲಿ ಒಂದಾದ ಮೇಲೆ ಒಂದು ಎಂಬಂತೆ ಎಲ್ಲ ನಡೆಯುತ್ತಿದೆ. ಎರಡೂ ಜೊತೆ ಜೊತೆಗೆ ನಡೆದಿದೆಯೇನು?
“”ಹೇಮಂತದಂತ್ಯದಲ್ಲೇ ಬಂದು ಚಿಗುರುವ ವಸಂತ,
ಗ್ರೀಷ್ಮದ ಮಹಾತಾಪವನ್ನೇ ನುಂಗಿ ಹನಿಹನಿಯಾಗಿ ಮಂದಯಿಸಿ ಭೋರ್ಗರೆವ ಸುರಿಮಳೆಯ ಧಾರೆ,
ಒಂದೊಂದೇ ಈ ರೀತಿ ಬಂದು ರಂಗಸ್ಥಳಕ್ಕೆ
ಕುಣಿವಂಥ ಈ ದ್ವಂದ್ವಗಳೇ ಈ ಜಗದ ಮೂಲ ಸ್ವರೂಪ”
ಇದು ಹೀಗೆಂದು ಎಲ್ಲರಿಗು ತಿಳಿದಿರಲೇಬೇಕು. ತಿಳಿದಿದೆ ಎನ್ನುತ್ತಾರೆ ಕವಿ. ಯಾರಿಗೆಲ್ಲ ತಿಳಿದಿದೆ?
Related Articles
ಬದ್ಧನಾಗಿದ್ದರೂ ಅನಿರ್ಬದ್ಧ ಎನ್ನುವ ಹಾಗೆ
ಬಡಬಡಿಸುವ ಅಧ್ಯಾತ್ಮವಾದಿಗೂ ಗೊತ್ತುಂಟು
ನಮ್ಮಿà ಜಗತ್ತು ದ್ವಂದ್ವಾವಳಿಯ ಛಂದ”
ಹಾಗಾದರೇನು ಗತಿ?
ಈಗ ಹೇಳುತ್ತಾರೆ ಕವಿತೆಯ ಕೊನೆಯ ಮಾತುಗಳನ್ನು.
“”ಸತ್ತ ಮೇಲೇ ಬಹುಶಃ ತೊಲಗುವುದು ಈ ದ್ವಂದ್ವ ನಿರ್ಬಂಧ
ಸಾಯದೇ ತಿಳಿಯದದು. ಸತ್ತಮೇಲೆ ಬಂದವರು ಯಾರೂ ಇಲ್ಲ.
Advertisement
ಬಂದರೆ ಅವರ ಮಾತು ಬದುಕಿರುವವರಿಗಂತೂ ಅಲ್ಲವೆ ಅಲ್ಲ”ಈ ಮಾತುಗಳು ಸ್ಪಷ್ಟವಾಗಿವೆ. ಬದುಕೆನ್ನುವುದೇ ಒಂದು ದ್ವಂದ್ವಾತ್ಮಕವಾದ ವಾಸ್ತವವಾಗಿದೆ. ಬದುಕಿನ ಇನ್ನೊಂದು ತುದಿ ಎಂದರೆ ಸಾವು. ಬದುಕೆಂಬ ಇಂದ್ರಿಯಾನುಭವಕ್ಕೆ ವಿರುದ್ಧವಾಗಿ ನಿಂತಿರುವ, ಎಲ್ಲ ಅನುಭವಗಳಾಚೆ ಇರುವ ಸಾವು. ಅದು ಅನುಭವಗಳಾಚೆ ಇರುವುದರಿಂದ ಸಾವಿನಲ್ಲಿ ಎಲ್ಲ ದ್ವಂದ್ವಗಳೂ ಮುಗಿಯಬಹುದೇನೋ. ಆದರೆ ಅದು ಅನುಭವಿಸದೆ ಅಂದರೆ ಸಾಯದೆ ತಿಳಿಯದು. ಸಾವಿನ ಅನುಭವ ಪಡೆದವರು ಇಲ್ಲಿರಲು ಸಾಧ್ಯವೆ? ಒಂದೊಮ್ಮೆ ವಾದಕ್ಕಾಗಿ ಅಂಥವರಿರಬಹುದು ಎಂದೊಪ್ಪಿದರೂ ಅಂಥವರು ಮಾತನಾಡಿದರೆ ಅದು ಬದುಕಿರುವವರನ್ನು , ಬದುಕನ್ನು ಉದ್ದೇಶಿಸಿದ ಮಾತಾಗಿರುವುದು ಸಾಧ್ಯವೆ?
ಆರುವ ದೀಪ ಒಮ್ಮೆ ಝಗ್ಗನೆ ಹೊತ್ತಿ ಉರಿಯುವುದಂತೆ. ಅಂಥ ಕ್ಷಣದಲ್ಲಿ ಹುಟ್ಟಿ ಬಂದ ಕವಿತೆ ಇದು. ಆ ಕೊನೆಯ ಕ್ಷಣದ ಉರಿಯುವಿಕೆಯಲ್ಲಿ ವ್ಯಕ್ತಿಯ ಸ್ವಭಾವವು ಪ್ರಕಟವಾಗುತ್ತದೆ. ಅಡಿಗರು ನಡೆದುಬಂದ ದಾರಿಯನ್ನು ಇಡಿಯಾಗಿ ತೊರೆದು ಹೊಸ ಹಾದಿಗೆ ಹೊರಳಿದ ಸಂದರ್ಭವೂ ಹೀಗೇ ಇತ್ತು. ಜೀವನ್ಮರಣ ಪ್ರಶ್ನೆಯಾಗಿತ್ತು ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವಂತೆ ಕರೆದ ಮೋಹನಮುರಲಿಯ ಕರೆಯನ್ನು ಒಂದು ಕಾಲದಲ್ಲಿ ಕೇಳಿದ್ದ ಕವಿ, ಈಗ ಮೋಹನಮುರಲಿಯ ಸ್ವರ ತರಂಗಗಳು ಹರಿದುಬಂದ ಗಾಳಿ ಬೀದಿಯ ನಡೆಯನ್ನು ತಿರಸ್ಕರಿಸಿ ಹೊಸಹಾದಿಯನ್ನು ತುಳಿದು ಇಷ್ಟು ಕಾಲದ ಮೇಲೆ, ಇರುವುದೆಲ್ಲವ ಬಿಟ್ಟು ನಡೆಯಲೇಬೇಕಾದ ಹೊತ್ತಿನಲ್ಲಿ ಆಚೆ ಇನ್ನೇನೋ ಇದೆ ಎಂದು ನಂಬಲಾರರು. ನಂಬಿಸಲಾರರು. ಅಲ್ಲಿ ಮೋಹನಮುರಲಿಯ ನಾದ ಕೇಳಬಹುದೇನೋ ಎಂದು ಸಂದೇಹಿಸಲಾರರು ಕೂಡ. ತನ್ನ ಅನುಭವವನ್ನಷ್ಟೆ ತಾನು ಮೈಯ್ಯಲ್ಲಿ ಹೊತ್ತಿದ್ದೇನೆ ಎನ್ನುವರು. ಅಡಿಗರು ಸಾವನ್ನು ನೆನೆವ ಹೊತ್ತಿನಲ್ಲಿ ಯಾವ ರಹಸ್ಯಮಯತೆಯತ್ತಲೂ ಮನಗೊಟ್ಟಿಲ್ಲ ! ಕವಿತೆ ಈ ಅರ್ಥದಲ್ಲಿ ತುಂಬ ಪ್ರಾಮಾಣಿಕವಾಗಿದೆ. ಬದುಕಿನಲ್ಲೇ ಕಾಲೂರಿ ನಿಂತಿದೆ. ಬದುಕು, ಬದುಕನ್ನು ಕುರಿತು ಹೇಳಬಹುದಷ್ಟೇ ವಿನಾ ಅದು ಸಾವಿನ ಕುರಿತು ಹೇಳುವಂಥದು ಕೂಡ ಏನೂ ಇಲ್ಲ ಎಂದು ಕಂಡುಕೊಂಡು ತನ್ನಲ್ಲೇ ಬದುಕು ಮೌನವಾಗುವ ಹೊತ್ತು ಇದು. ಸಾವನ್ನು ಕೂಡ ಎಲ್ಲವೂ ಮೌನವಾಗುವ ಹೊತ್ತು ಎಂದು ಭಾವಿಸಿದೆವಾದರೆ ತನ್ನ ಮೌನದಲ್ಲೇ ಬದುಕು, ಸಾವಿನ ಅರ್ಥವನ್ನು ಪಡೆಯಬಹುದೇನೋ. ಆಗ ದ್ವಂದ್ವವು “ಸಮತೂಕ’ದ ಇನ್ನೊಂದು ಸ್ಥಿತಿಯನ್ನು ಹೊಂದಲಾದೀತು. ಕವಿತೆ ಈ ಕುರಿತು ಯಾವ ಬಾಹ್ಯಸೂಚನೆಯನ್ನು ಕೊಡದೇ ಇದ್ದರೂ ತನ್ನ ಅನುಭವದಲ್ಲಿಯೇ ತಾನು ನೆಚ್ಚಿದ್ದುದೇ ಕಾರಣವಾಗಿ-ತನ್ನ ಮೈತೂಕದಲ್ಲಿಯೇ ಇಡಿಯಾಗಿ ಮುಳುಗಿದ್ದ ಒಂದು ವಸ್ತುವಿಗೆ ಅಂಥದೇ ಇನ್ನೊಂದು ವಸ್ತು ಎದುರಾದಾಗ ಮಾತ್ರ “ಸಮತೂಕ’ ಎನ್ನುವ ಅರಿವು ಬರುವಂತೆ- “ದ್ವಂದ್ವ’ವು ಅರ್ಥವಾಗದು ಎನ್ನುತ್ತಲೇ “ಸಾವೂ’ ಅರ್ಥವಾಗದು ಎಂಬ ಅಲ್ಲಮನ ಮಾತು ನೆನಪಾಗುತ್ತದೆ. “”ಸತ್ತು ಮುಂದೆ ದೇವರ ಕೂಡಿಹೆವೆಂಬಿರಿ ಸಾಯದ ಮುನ್ನ ಸತ್ತಿಪ್ಪಿರಿ”
ಈ ಮಾತಿನ ಇನ್ನೊಂದು ಮುಖ ಅಡಿಗರ ಕವಿತೆಯಲ್ಲಿದೆ. ಸಾವಿನ ಮಾತು ಬದುಕಿಗೆ ಅಲ್ಲ. ಬದುಕಿನ ಮಾತು ಸಾವಿಗೂ ಅಲ್ಲ ಎಂಬುದು ಕವಿತೆಯ ಮಾತು. ಪರಸ್ಪರ ನಿರಾಕರಣೆಯ ಗುಣ ಎರಡು ಕಡೆಯೂ ಒಂದೇ ಆಗಿರುವುದಾಗಿ ತನ್ನ ಅರಿವು ಇನ್ನೊಂದರ ಅರಿವೂ ಆಗಿ ಮಾರ್ಪಡುತ್ತದೆ!
ಇದು ನಿಸ್ಸಂದೇಹವಾಗಿ ನವ್ಯ ಕವಿತೆ. ಮತ್ತೆ ಭಾವಗೀತೆಯ ದಿಕ್ಕಿನತ್ತ ಹೊರಳಿದ ರೇನೋ ಎಂದುಕೊಳ್ಳುವಾಗಲೇ ಕವಿ ಮತ್ತೆ ಎಚ್ಚರಾದರು. ಅದು ವಿದಾಯದ ಎಚ್ಚರವೂ ಆಗಿತ್ತು! ಲಕ್ಷ್ಮೀಶ ತೋಳ್ಪಾಡಿ