Advertisement

ಇವಿಎಂ ಬಳಕೆಗೆ ಅಪಸ್ವರ ಸರಿಯಲ್ಲ

02:59 PM May 25, 2022 | Team Udayavani |

ಚಿತ್ರದುರ್ಗ: ವಿರೋಧ ಪಕ್ಷಗಳು ಇವಿಎಂ ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಭಾರತದ ಮತದಾರನ ಅಭಿಪ್ರಾಯವನ್ನೇ ಅವಮಾನಿಸಿದಂತೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಜೆಎಂಸಿ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಪ್ರಕೋಷ್ಠಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲೂ ಇದೇ ಇವಿಎಂ ಯಂತ್ರಗಳಿಂದ ಚುನಾವಣೆ ಮಾಡಲಾಗಿದೆ. ಅಲ್ಲಿ ಮೋಸವಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಕಡಿತಗೊಳಿಸಿದೆ. ಆದರೆ ಇದನ್ನು ಸಹಿಸಿಕೊಳ್ಳದ ವಿಪಕ್ಷಗಳು ಇದರಲ್ಲೂ ಕೊಂಕು ಮಾಡುತ್ತವೆ. ಅಕ್ಕ ಪಕ್ಕದಲ್ಲಿರುವ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಅಫ್ಘಾನಿಸ್ಥಾನ ರಾಷ್ಟ್ರಗಳಲ್ಲಿ ದುಡ್ಡು ಕೊಟ್ಟರೂ ಅಗತ್ಯ ವಸ್ತುಗಳು ಸಿಗದಿರುವಾಗ ಭಾರತದ ಆಡಳಿತ ವ್ಯವಸ್ಥೆ ಎಷ್ಟು ಉತ್ತಮವಾಗಿದೆ ಎನ್ನುವುದನ್ನು ಗಮನಿಸಬೇಕು ಎಂದರು.

ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಇಡೀ ಜಗತ್ತಿನ ಮೇಲೆ ಆಗಿದೆ. ಈ ನಡುವೆಯೂ ಉತ್ತಮ ಆರ್ಥಿಕ ನಿರ್ಧಾರಗಳಿಂದ ದೇಶ ಮುನ್ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಗಂಗಾ ಕಲ್ಯಾಣ ಯೋಜನೆಗೆ ಹೆಚ್ಚು ಅನುದಾನ ಮೀಸಲಿಟ್ಟಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ 18 ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ನಮ್ಮ ಪ್ರಕೋಷ್ಠಗಳು ಮತದಾರನಿಗೆ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪ್ರಭಾರಿ ಪ್ರೇಮಕುಮಾರ್‌ ಮಾತನಾಡಿ, ಈ ಹಿಂದೆ ಬಿಜೆಪಿ ಎಂದರೆ ಶೆಟ್ಟರು ಮತ್ತು ಭಟ್ಟರ ಪಕ್ಷ ಎಂದು ಮೂದಲಿಸಲಾಗುತ್ತಿತ್ತು. ಆಗ ಇಬ್ಬರೇ ನಾಯಕರಿದ್ದರು. ಆದರೆ ಇಂದು ಬಿಜೆಪಿ ವಿಶ್ವದ ನಂ.1 ಪಕ್ಷವಾಗಿ ಹೊರ ಹೊಮ್ಮಿದ್ದು, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ. ಸರ್ವ ಜನಾಂಗದವರನ್ನೂ ಪಕ್ಷ ಒಳಗೊಂಡಿದೆ. ನಮ್ಮಲ್ಲಿ ಈಗ ಸಾಕಷ್ಟು ಜನ ನಾಯಕರಿದ್ದಾರೆ. ‘ಸರ್ವ ಸ್ಪರ್ಶಿ ಸರ್ವ ವ್ಯಾಪಿ’ ಎನ್ನುವುದು ಬಿಜೆಪಿ ನಿಲುವು. ಎಲ್ಲ ವರ್ಗಗಳನ್ನು ಪಕ್ಷ ಹಾಗೂ ಪಕ್ಷದ ಕಾರ್ಯಕ್ರಮಗಳು ತಲುಪಬೇಕು. ಈ ನಿಟ್ಟಿನಲ್ಲಿ ಪ್ರಕೋಷ್ಠಗಳ ಕಾರ್ಯ ಮಹತ್ವದ್ದಾಗಿದೆ ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ಮಾತನಾಡಿ, ಅಂತ್ಯೋದಯ ಬಿಜೆಪಿಯ ಕನಸು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕಿದೆ. ಇದರ ಜವಾಬ್ದಾರಿ ಪ್ರಕೋಷ್ಠಗಳ ಮೇಲಿದೆ. ಸರ್ಕಾರದ ಯೋಜನೆಗಳು ತಲುಪದ ಕೊನೆಯ ವ್ಯಕ್ತಿಗಳನ್ನು ನಮ್ಮ ಕಾರ್ಯಕರ್ತರು ತಲುಪಬೇಕು. ಅವರಿಗೆ ಸೌಲಭ್ಯ ದೊರಕಿಸಿಕೊಡಬೇಕು ಎಂದು ತಿಳಿಸಿದರು.

ಸಮಾವೇಶದಲ್ಲಿ ಪ್ರಕೋಷ್ಠಗಳ ಸಹ ಸಂಯೋಜಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ರಾಜ್ಯ ಶಿಕ್ಷಣ ಸಹ ಸಂಚಾಲಕ ಹಾಗೂ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಕೆ.ಎಂ.ಸುರೇಶ್‌ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್‌ ಸ್ವಾಗತಿಸಿದರು. ಮೊರಾರ್ಜಿ ಪ್ರಾರ್ಥಿಸಿದರು.

ತಾಪಂ-ಜಿಪಂ ಚುನಾವಣೆ ಗೆಲುವಿಗೆ ಶ್ರಮಿಸಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಎದುರಾಗುವ ತಾಪಂ, ಜಿಪಂ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿದರೆ ಮುಂದಿನ ಚುನಾವಣೆಗೆ ವೇದಿಕೆ ಸಿದ್ಧವಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಮತದಾರರ ಮನೆಬಾಗಿಲಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್. ನವೀನ್‌ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಕುರಿತು ಇಲ್ಲಸಲ್ಲದ್ದನ್ನು ಹೇಳಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕೊಡುಗೆಗಳನ್ನು ಪ್ರತಿ ಮನೆ ಮನೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಶ್ರದ್ಧೆಯಿಂದ ಮಾಡಬೇಕಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ವಿರೋಧಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ ಹತ್ತು ರೂ. ಕಡಿಮೆಯಾಗಿದೆ. ಡೀಸೆಲ್‌ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದರು. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವ ಪಕ್ಷ ಬಿಜೆಪಿ ಮಾತ್ರ. ಇಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಿದ್ಧಾಂತವಿದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಎ. ಮುರಳಿ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್‌, ರಾಜೇಶ್‌ ಬುರುಡೆಕಟ್ಟೆ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next