Advertisement

ಯುಪಿಯಲ್ಲಿ ಮತ್ತೆ ಶುರು ಇವಿಎಂ ಸದ್ದು

08:15 AM Dec 03, 2017 | Team Udayavani |

ಲಕ್ನೋ:ಉತ್ತರ ಪ್ರದೇಶದಲ್ಲಿ ಈಗ ಮತ್ತೆ ಇವಿಎಂ ಸದ್ದು ಮಾಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಬೆನ್ನಲ್ಲೇ ವಿಪಕ್ಷಗಳು ಮತ್ತೆ ವಿದ್ಯುನ್ಮಾನ ಮತಯಂತ್ರ ತಿರುಚಿರುವ ಆರೋಪ ಮಾಡಲಾರಂಭಿಸಿವೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್ಪಿ ನಾಯಕ ಅಖೀಲೇಶ್‌ ಯಾದವ್‌ ಅವರು ಬಿಜೆಪಿಯನ್ನೇ ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸಿದ್ದಾರೆ. ಇವಿಎಂ ತಿರುಚುವ ಮೂಲಕವೇ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿವೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಕೂಡ ಇದಕ್ಕೆ ಧ್ವನಿಗೂಡಿಸಿದೆ.

Advertisement

“”ಬಿಜೆಪಿ ಪ್ರಾಮಾಣಿಕವಾಗಿ ಚುನಾವಣೆ ಗೆದ್ದಿದ್ದೇವೆ ಎಂದು ಹೇಳುವುದಾದರೆ ಇವಿಎಂ ಬದಲು ಮತಪತ್ರವನ್ನೇ ಬಳಸಿ ಗೆಲ್ಲಲಿ ನೋಡೋಣ. ಮತಪತ್ರ ಬಳಸಿ ಚುನಾವಣೆ ಎದುರಿಸಿದ್ದೇ ಆದಲ್ಲಿ ಬಿಜೆಪಿ ಖಂಡಿತಾ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ” ಎಂದು ಮಾಯಾವತಿ ಹೇಳಿದ್ದಾರೆ.

ಅಲ್ಲದೇ, ಈ ಗೆಲುವಿನ ಹಿಂದಿನ ಗುಟ್ಟನ್ನು ತಿಳಿಯುವ ಪ್ರಯತ್ನವನ್ನೂ ಬಿಎಸ್‌ಪಿ ಮಾಡಿದೆ. “”ಬಿಜೆಪಿ ಎಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದಿದೆಯೋ ಅಲ್ಲಿ ಇವಿಎಂ ಬಳಸಲಾಗಿದೆ. ಬಿಜೆಪಿ ಎಲ್ಲಿ ಮುಗ್ಗರಿಸಿದೆಯೋ ಅಲ್ಲಿ ಮತಯಂತ್ರ ಬಳಸಲಾಗಿಲ್ಲ. ಅಲ್ಲೆಲ್ಲ ಇವಿಎಂ ತಿರುಚಲಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ” ಎಂದಿದ್ದಾರೆ ಮಾಯಾ.
ಇನ್ನು ಈ ಬಗ್ಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿರುವ ಅಖೀಲೇಶ್‌ ಯಾದವ್‌, “”ಇವಿಎಂ ಬಳಕೆ ಮಾಡದೇ ಗೆಲ್ಲುವ ತಾಕತ್ತು ಬಿಜೆಪಿಗಿಲ್ಲ” ಎಂದಿದ್ದಾರೆ. ಆದರೆ ವಿಪಕ್ಷಗಳ ಈ ಎಲ್ಲಾ ಆರೋಪವನ್ನೂ ಬಿಜೆಪಿ ತಳ್ಳಿಹಾಕಿದೆ. ಸೋಲಿನ ಹತಾಶೆಯಲ್ಲಿ ಮತ್ತೆ ಇವಿಎಂ ತಿರುಚಿದ್ದಾರೆಂದು ಆರೋಪಿಸುವ ಸಣ್ಣತನ ಪ್ರದರ್ಶಿಸುತ್ತಿವೆ ಎಂದಿದೆ. 

ಇವಿಎಂ ಇಲ್ಲದೇ ನಡೆಯಲಿ ಚುನಾವಣೆ: ಇದೇ ವೇಳೆ ಬಿಜೆಪಿಯೇತರ ಬಹುತೇಕ ಪಕ್ಷಗಳೆಲ್ಲವೂ ಭವಿಷ್ಯದಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿಯೂ ಮತ ಪತ್ರದ ಮೂಲಕವೇ ಫ‌ಲಿತಾಂಶ ಪಡೆಯಬೇಕೆನ್ನುವ ನಿರ್ಧಾರಕ್ಕೆ ಬಂದಿವೆ. ಈ ಸಂಬಂಧ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವ ಹಾಗೂ ಇವಿಎಂ ಬೇಡವೇ ಬೇಡ ಎಂದು ಪಟ್ಟು ಹಿಡಿಯಲು ಮುಂದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next