Advertisement

ಇವಿಎಂ: ಅನುಮಾನವಿಲ್ಲ; ಅಜಿತ್‌ ಪವಾರ್‌

11:38 AM May 17, 2019 | Vishnu Das |

ಪುಣೆ: ಒಂದೆಡೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಅವರ ಪುತ್ರಿ ಬಾರಾಮಾತಿ ಸಂಸದೆ ಸುಪ್ರಿಯಾ ಸುಳೆ ಅವರು ಇಲೆಕ್ಟ್ರಾನಿಕ್‌ ಮತದಾನ ಯಂತ್ರಗಳ (ಇವಿಎಂ) ಕಾರ್ಯಾಚರಣೆಯ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ಪಕ್ಷದ ಹಿರಿಯ ನಾಯಕ ಅಜಿತ್‌ ಪವಾರ್‌ ಅವರು ಈ ವಿಷಯದ ಕುರಿತು ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವಂತೆ ತೋರುತ್ತಿದ್ದಾರೆ. ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮ ಸಿಬಂದಿಗಳೊಂದಿಗೆ ಮಾತನಾಡಿದ ಶರದ್‌ ಪವಾರ್‌ ಅವರ ಸೋದರಳಿಯ ಅಜಿತ್‌ ಪವಾರ್‌ ಅವರು, ಇವಿಎಂಗಳ ಕಾರ್ಯಚಟುವಟಿಕೆಯ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Advertisement

ಇವಿಎಂಗಳನ್ನು ತಿರುಚಲು ಸಾಧ್ಯವಿದೆ ಎಂದಾದರೆ, ಕಳೆದ ವರ್ಷದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಗಳಿಸುತ್ತಿರಲಿಲ್ಲ. ಈ ವಿಷಯದಲ್ಲಿ ನ್ಯಾಯಾಲಯವು ಕೂಡ ಅದರ ನಿರ್ಧಾರವನ್ನು ತಿಳಿಸಿದೆೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ನುಡಿದಿದ್ದಾರೆ.

ಮತದಾನದಲ್ಲಿ ಇವಿಎಂಗಳ ಬಳಕೆಯ ಬಗ್ಗೆ ಕೆಲವು ಜನರಿಗೆ ಸಂಶಯವಿದೆ ಮತ್ತು ಅಂತಹ ಸಂಶಯಗಳು ಪ್ರಜಾಪ್ರಭುತ್ವಕ್ಕೆ ಉತ್ತಮವಲ್ಲ. ನನಗೆ ಅದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಇವಿಎಂಗಳನ್ನು ತಿರುಚಬಹುದಾಗಿದ್ದರೆ, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅವರು (ಬಿಜೆಪಿ) ಸೋಲುತ್ತಿರಲಿಲ್ಲ ಎಂದು ಅಜಿತ್‌ ಪವಾರ್‌ ಹೇಳಿದ್ದಾರೆ.

ಬರ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ರಾಜ್ಯ ಸಚಿವಾಲಯ ಮಂತ್ರಾಲಯದಲ್ಲಿ ಸಭೆಗಳನ್ನು ನಡೆಸುವ ಸಂಬಂಧ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುಳೆ ಅವರು, ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿರ್ಣಯಿಸುವುದರ ಮೇಲೆ ನಂಬಿಕೆಯನ್ನು ಹೊಂದಿದ್ದೇವೆ. ಅದಕ್ಕಾಗಿ ಪಕ್ಷದ ನಾಯಕರು ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೂ, ಪ್ರತಿಯೊಬ್ಬ ನಾಯಕರು ತಮ್ಮದೇ ಆದ ಕಾರ್ಯಶೈಲಿಯನ್ನು ಹೊಂದಿರುತ್ತಾರೆ ಎಂದರು.

ಈ ಹಿಂದೆ ಮುಂಬಯಿಯಲ್ಲಿ ಮತ್ತು ಸತಾರಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಇವಿಎಂಗಳ ಕಾರ್ಯಾಚರಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

Advertisement

ಮತದಾನ ಪತ್ರಗಳು ಪಾರದರ್ಶಕ
ಅದೇ, ಮಂಗಳವಾರ ಪುಣೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮವೊಂದರಲ್ಲಿ ಸುಪ್ರಿಯಾ ಸುಳೆ ಅವರು, ಬ್ಯಾಲೆಟ್‌ ಪೇಪರ್‌ಗಳ ಬಳಕೆಯು ಇವಿಎಂಗಳಿಗಿಂತ ಹೆಚ್ಚು ಪಾರದರ್ಶಕವಾಗಿತ್ತು ಎಂದು ನುಡಿದಿದ್ದಾರೆ. ದೇಶಾದ್ಯಂತ ವಿಪಕ್ಷಗಳು ಇವಿಎಂಗಳ ಕಾರ್ಯಚಟುವಟಿಕೆಗಳ ವಿರುದ್ಧ ಅನುಮಾನವನ್ನು ವ್ಯಕ್ತಪಡಿಸುತ್ತಿವೆ. ಇವಿಎಂಗಳ ವಿರುದ್ಧದ ಹೋರಾಟವು ಮುಂದುವರಿಯಲಿದೆ. ಚುನಾವಣ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕವಾಗಿ ಮಾಡಲು ಈ ಹೋರಾಟವನ್ನು ಮಾಡಲಾಗುತ್ತಿದೆ ಎಂದು ಮರಾಠ ರಾಜ ಸಂಭಾಜಿ ಮಹಾರಾಜ್‌ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿತ ಕಾರ್ಯಕ್ರಮದಲ್ಲಿ ಸುಳೆ ನುಡಿದಿದ್ದಾರೆ. ವಿಪಕ್ಷವು ಈ ವಿಷಯವನ್ನು ಹಲವು ಬಾರಿ ಚುನಾವಣ ಆಯೋಗದ ಮುಂದೆ ಎತ್ತಿದೆ ಮತ್ತು ಚುನಾವಣೆಯಲ್ಲಿ ಮತದಾನ ಪತ್ರಗಳನ್ನು ಬಳಸಲು ಕೋರಿದೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next