Advertisement

ಇವಿಎಂ ದೋಷ ಬಹಿರಂಗಕ್ಕೆ ಪ್ರಿಯಾಂಕ ಖರ್ಗೆ ಪತ್ರ

12:47 PM Jan 03, 2018 | |

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಇವಿಎಂ (ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌)ಗಳಲ್ಲಿನ ದೋಷಗಳ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲಗಳ ನಿವಾರಣೆಗೆ ಬಹಿರಂಗ ಪ್ರಾತ್ಯಕ್ಷಿಕೆ ಏರ್ಪಡಿಸಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದಾರೆ.

Advertisement

ಇವಿಎಂಗಳ ದೋಷಗಳ ಬಗ್ಗೆ ಬಹಿರಂಗ ಸವಾಲು ಹಾಕದೇ ದೋಷಗಳನ್ನು ಪತ್ತೆಹಚ್ಚಿ ಬಹಿರಂಗ ಪಡಿಸಲು ಅವಕಾಶ ಕಲ್ಪಿಸಬೇಕು ಎನ್ನುವ ಮನವಿ ಮಾಡಿಕೊಂಡಿರುವ ಪ್ರಿಯಾಂಕ ಖರ್ಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತೀಯ ಚುನಾವಣಾ ಪದ್ಧತಿ ಸಾಕಷ್ಟು ಪಾವಿತ್ರ್ಯತೆ ಉಳಿಸಿಕೊಂಡಿದ್ದು, ಕಳೆದ 70 ವರ್ಷಗಳಿಂದಲೂ ಚುನಾವಣೆಯನ್ನು ಆಯೋಗವು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ.

ತಂತ್ರಜ್ಞಾನ ಆವಿಷ್ಕಾರದ ನಂತರ ಕೇಂದ್ರ ಚುನಾವಣಾ ಆಯೋಗ ದೇಶದಲ್ಲಿ 1999ರಲ್ಲಿ ಮೊದಲ ಬಾರಿಗೆ ಇವಿಎಂಗಳ ಬಳಕೆ ಆರಂಭಿಸಿದೆ. ಇದರಿಂದ ಸಾಕಷ್ಟು ಮಾನವ ಶಕ್ತಿ ಮತ್ತು ಸಮಯದ ಉಳಿತಾಯವೂ ಆಗುತ್ತಿದೆ. ಅಲ್ಲದೇ ಬೋಗಸ್‌ ವೋಟಿಂಗ್‌ ನಿಯಂತ್ರಣ ಮತ್ತು ಚುನಾವಣಾ ಫ‌ಲಿತಾಂಶವನ್ನು ಶೀಘ್ರವಾಗಿ ನೀಡಲು ಇವಿಎಂಗಳ ಬಳಕೆ ಮಹತ್ವದ್ದಾಗಿದೆ. 

ಆದರೆ, ಸಾಕಷ್ಟು ಸಂಖ್ಯೆ ಇವಿಎಂಗಳ ಬಳಕೆಯಿಂದ ನಿರ್ದಿಷ್ಟ ವ್ಯಕ್ತಿಯ ಪರವಾಗಿ ಮತಗಳು ಬೀಳುವಂತೆ ಮಾಡಲು ಇವಿಎಂಗಳನ್ನು ಹ್ಯಾಕ್‌ ಮಾಡಬಹುದೆಂಬ ಸಂಶಯ ಜನರಲ್ಲಿ ಮೂಡಿತ್ತು. ಆಯೋಗ ರಾಜಕೀಯ ಪಕ್ಷಗಳಿಗೆ ಅದರ ಸತ್ಯಾಸತ್ಯತೆಯ ಪರೀಕ್ಷೆಗೆ ಮುಕ್ತ ಅವಕಾಶ ನೀಡಿತ್ತು. ಅಲ್ಲದೇ ಸುಪ್ರೀಂಕೋರ್ಟ್‌ ಕೂಡ ಇವಿಎಂಗಳ ನಿಖರತೆಯ ಬಗ್ಗೆ ತಿಳಿಯಲು ವಿವಿ ಪ್ಯಾಟ್‌ಗಳನ್ನು ಅಳವಡಿಸಲು ಆದೇಶ ನೀಡಿತ್ತು.

ಸುಪ್ರಿಂಕೋರ್ಟ್‌ ಆದೇಶದಂತೆ ಕೆಲವು ಇವಿಎಂಗಳಿಗೆ ಮಾತ್ರ ಆಯ್ಕೆ ಆಧಾರದಲ್ಲಿ ವಿವಿ ಪ್ಯಾಟ್‌ ಅಳವಡಿಸಿ ಪರೀಕ್ಷೆ ನಡೆಸುವುದರಿಂದ ಜನರಲ್ಲಿ ಸಂಶಯಗಳು ಉಳಿಯುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೇತೃತ್ವದಲ್ಲಿಯೇ 250 ಇವಿಎಂಗಳನ್ನು ಆಯ್ಕೆ ಮಾಡಿ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಇವಿಎಂಗಳ ಬಗ್ಗೆ ಜನರಿಗಿರುವ ಸಂಶಯ ನಿವಾರಿಸಬಹುದು.

Advertisement

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ತಜ್ಞರು ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಇವಿಎಂಗಳ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಅನುಕೂಲವಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಇವಿಎಂಗಳ ಬಗ್ಗೆ ಇರುವ ಅನುಮಾನ ದೂರ ಮಾಡಿ, ಚುನಾವಣಾ ವ್ಯವಸ್ಥೆಯನ್ನು ಸರಳಗೊಳಿಸಿದಂತಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next