Advertisement

ಹಲವೆಡೆ ಇವಿಎಂ ದೋಷ, ಮತದಾನ ವಿಳಂಬ

11:03 AM Apr 19, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಸಂದರ್ಭದಲ್ಲಿ ಹಲವೆಡೆ ಮತಯಂತ್ರ (ಇವಿಎಂ)ದೋಷ ಪ್ರಕರಣಗಳು ತುಸು ಹೆಚ್ಚಾಗಿಯೇ ವರದಿಯಾಗಿವೆ.

Advertisement

ಇವಿಎಂಗಳನ್ನು ಮತಗಟ್ಟೆ ತರುವ ಮುನ್ನ ಸಂಪೂರ್ಣ ಪರಿಶೀಲಿಸಿ ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದ್ದರೂ ತಾಂತ್ರಿಕ ಸಮಸ್ಯೆ ಯಿಂದಾಗಿ ದೋಷ ಕಾಣಿಸಿಕೊಂಡಿದ್ದು ಮತದಾನ ಕೆಲ ಕಾಲ ಸ್ಥಗಿತಗೊಳ್ಳಲು ಕಾರಣವಾಯಿತು.

ಇವಿಎಂಗಳಲ್ಲಿ ದೋಷ ಕಂಡು ಬಂದ ಕಾರಣ ಕೆಲವೆಡೆ ಎರಡು ಗಂಟೆವರೆಗೂ ಮತದಾನ ಸ್ಥಗಿತಗೊಂಡಿದ್ದು, ಮತಯಂತ್ರ ದೋಷದ ಕಾರಣ ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ವಿಳಂಬವಾಗಿ ಪ್ರಾರಂಭವಾದ ಪ್ರಸಂಗಗಳೂ ನಡೆದಿದೆ.

ಚಾಮರಾಜನಗರ ಕ್ಷೇತ್ರದ ಯಳಂದೂರು ತಾಲೂಕು ಉಪ್ಪಿನಮೊಳಗೆ ಗ್ರಾಮದ ಮತಗಟ್ಟೆಯಲ್ಲಿ ಮತದಾನಕ್ಕೆ ಬಂದ ಸಚಿವ ಸಿ.ಪುಟ್ಟರಂಗಶೆಟ್ಟಿ ಎರಡು ಗಂಟೆಗಳ ಕಾಲ ಕಾಯುವಂತಾಗಿದೆ.

ಅದೇ ರೀತಿ ಚಿಕ್ಕಮಗಳೂರಿನ ಮಹಾತ್ಮಗಾಂಧಿ ರಸ್ತೆ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ 40 ನಿಮಿಷ ತಡವಾಯಿತು. ಗೃಹಮಂಡಳಿ ಬಡಾವಣೆಯ ಮತಗಟ್ಟೆಯಲ್ಲಿ ಮಧ್ಯಾಹ್ನ 1.30ರಲ್ಲಿ ಇವಿಎಂನಲ್ಲಿ ದೋಷ ಕಾಣಿಸಿಕೊಂಡು ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು.

Advertisement

ಹಾಸನದ ಕಟ್ಟೆಪುರ ಮತಗಟ್ಟೆ, ಹೊಳೇನರಸೀಪುರದ ಎರಡು ಮತಗಟ್ಟೆಗಳಲ್ಲಿ ಇವಿಎಂ ದೋಷದ ಕಾರಣ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ಮೈಸೂರಿನಲ್ಲೂ ಕೆಲವು ಮತಗಟ್ಟೆಗಳಲ್ಲಿ ಇವಿಎಂ ಕೈಕೊಟ್ಟ ಕಾರಣ ಮತದಾನ ವಿಳಂಬವಾಯಿತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಮತಗಟ್ಟೆ ಸಂಖ್ಯೆ 101ರಲ್ಲಿ ಐದು ಬಾರಿ ಇವಿಎಂನಲ್ಲಿ ದೋಷ ಕಂಡು ಬಂದಿತು. ಚಿಕ್ಕಬಳ್ಳಾಪುರ ಕ್ಷೇತ್ರದ ನೆಲಮಂಗಲದ
227ನೇ ಮತಗಟ್ಟೆಯಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಇವಿಎಂನಲ್ಲಿ ದೋಷ ಕಾಣಿಸಿಕೊಂಡಿತ್ತು. ನಂತರ ಅಧಿಕಾರಿಗಳು ಸರಿಪಡಿಸಿದರು.

ಮಂಡ್ಯ ಲೋಕಸಭೆ ಕ್ಷೇತ್ರದ ಕೆ.ಆರ್‌.ಪೇಟೆಯ ಮಲ್ಲೇನಹಳ್ಳಿಯಲ್ಲಿ ಇವಿಎಂ ಅದಲು ಬದಲು ಆಗಿದ್ದರಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು. ನಂತರ ಚುನಾವಣಾ ಸಿಬ್ಬಂದಿ ತಹಸೀಲ್ದಾರ್‌ಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇವಿಎಂ ಇಡುವುದರಲ್ಲಿ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದು ಪತ್ತೆಯಾಯಿತು. ಬೆಂಗಳೂರಿನ ರಾಜರಾಜೇಶ್ವರಿನಗರದ ಎರಡು ಮತಗಟ್ಟೆಗಳಲ್ಲೂ ಇವಿಎಂ ಕೈಕೊಟ್ಟು ತುಸುಕಾಲ ಮತದಾರರರು ಪರದಾಡುವಂತಾಯಿತು.

ನಾಪತ್ತೆ: ಬೆಂಗಳೂರು ದಕ್ಷಿಣ ಹಾಗೂ ಸೆಂಟ್ರಲ್‌ ಲೋಕಸಭೆ, ಮೈಸೂರು ಲೋಕಸಭೆ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ದೂರುಗಳು ಕೇಳಿಬಂದಿವೆ. ಬೆಂಗಳೂರು ಕೇಂದ್ರದಲ್ಲಿ 1 ಲಕ್ಷ, ದಕ್ಷಿಣ ಕೇಂದ್ರದಲ್ಲಿ 60 ಸಾವಿರ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಲಾಗಿದೆ ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next