Advertisement

ಇವಿಎಂ ದೋಷ‌, ಹಿಂಸೆಪೀಡಿತ ಎಲೆಕ್ಷನ್‌

01:28 AM Apr 19, 2019 | sudhir |

ಹೊಸದಿಲ್ಲಿ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಎರಡನೇ ಹಂತದ ಲೋಕಸಭಾ ಸಮರವೂ ಹಿಂಸಾಚಾರ, ಗೋಲಿಬಾರ್‌, ಇವಿಎಂ ಲೋಪ, ನಕ್ಸಲ್‌ ದಾಳಿಯಂಥ ಘಟನೆಗಳಿಗೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಲದಲ್ಲಿ ಅತಿ ಹೆಚ್ಚಿನ ಹಿಂಸಾಚಾರ ವರದಿಯಾಗಿದ್ದು, ಉಳಿದಂತೆ ಇತರೆ ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಆದರೆ, ಇತರೆ ಕೆಲವು ಸಮಸ್ಯೆಗಳು ಮತ ಪ್ರಕ್ರಿಯೆಗೆ ಅಡ್ಡಿಯಾದ ಘಟನೆಗಳು ನಡೆದಿವೆ.

Advertisement

11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿದೆ. ಜತೆಗೆ ತಮಿಳುನಾಡಿನ 18 ಅಸೆಂಬ್ಲಿ ಕ್ಷೇತ್ರಗಳು ಮತ್ತು ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮತದಾನ ಪೂರ್ಣಗೊಂಡಿದೆ. ಚುನಾವಣಾ ಅಕ್ರಮ ಹಿನ್ನೆಲೆಯಲ್ಲಿ ವೆಲ್ಲೂರ್‌ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದು ಮಾಡಿದೆ.

ಉಳಿದಂತೆ, ಕರ್ನಾಟಕದ 14, ಮಹಾರಾಷ್ಟ್ರದ 10, ಉತ್ತರಪ್ರದೇಶದ 8, ಅಸ್ಸಾಂ, ಬಿಹಾರ ಮತ್ತು ಒಡಿಶಾದ ತಲಾ 5, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಲದಲ್ಲಿ ತಲಾ 3, ಜಮ್ಮು-ಕಾಶ್ಮೀರದ 2, ಮಣಿಪುರ ಹಾಗೂ ಪುದುಚೇರಿಯ ತಲಾ 1 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿದೆ.

ಬಂಗಾಲದಲ್ಲಿ ಬೆಂಕಿ: ರಾಜಕೀಯ ಸೂಕ್ಷ್ಮ ರಾಜ್ಯವಾದ ಪಶ್ಚಿಮ ಬಂಗಾಲದಲ್ಲಿ ಎರಡನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ ನಡೆದಿವೆ. ಇಲ್ಲಿನ ಛೋಪ್ರಾದಲ್ಲಿ ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದ್ದು, ಬಾಂಬ್‌ಗಳನ್ನೂ ಎಸೆದಿದ್ದಾರೆ. ಕೊನೆಗೆ ಅವರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಘಟನೆ ಸಂಬಂಧ ಕನಿಷ್ಠ ಮೂವರನ್ನು ಬಂಧಿಸಲಾಗಿದೆ. ರಾಜಗಂಜ್‌ನ ಸಿಪಿಎಂ ಅಭ್ಯರ್ಥಿ ಎಂ.ಡಿ. ಸಲೀಂ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆಯೂ ನಡೆದಿದೆ. ಸಲೀಂ ಅವರು ಕಾಂಗ್ರೆಸ್‌ನ ಹಾಲಿ ಸಂಸದರಾದ ದೀಪಾ ದಾಸ್‌ಮುನ್ಶಿ ವಿರುದ್ಧ ಕಣಕ್ಕಿಳಿದಿದ್ದಾರೆ. ಇಸ್ಲಾಂಪುರ ಪಟಗಾರಾದಲ್ಲಿ ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯಲ್ಲಿ ತೃಣಮೂಲ ಕಾಂಗ್ರೆಸ್‌ ಬೆಂಬಲಿಗರು ಮತದಾರರಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದ್ದಾರೆ ಎಂದು ಸಲೀಂ ಆರೋಪಿಸಿದ್ದಾರೆ. ಇದೇ ವೇಳೆ, ಕೆಲವು ಮತದಾರರನ್ನು ಹೆದ್ದಾರಿಯಲ್ಲೇ ತಡೆದು, ಹಕ್ಕು ಚಲಾಯಿಸಲು ಬಿಡದ ಘಟನೆಗಳು ವರದಿಯಾಗಿವೆ. ಅಪರಿಚಿತ ದುಷ್ಕರ್ಮಿಗಳು ನಮಗೆ ಮತ ಹಾಕಲು ಬಿಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಕೊನೆಗೆ ಪೊಲೀಸರು ಲಾಠಿ ಪ್ರಯೋಗ ಮಾಡಬೇಕಾಯಿತು.

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಬಿಜೆಪಿ ಯುವ ಘಟಕದ ಕಾರ್ಯಕರ್ತ 22 ವರ್ಷದ ಶಿಶುಪಾಲ್‌ ಸಾಹಿಸ್‌ ಎಂಬವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಸೆನಾಬಾನಾ ಗ್ರಾಮದಲ್ಲಿ ಪತ್ತೆಯಾಗಿದೆ. ಇವರು ಬುಧವಾರ ಬೆಳಗ್ಗೆಯಿಂದಲೇ ಕಾಣೆಯಾಗಿದ್ದರು. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಆದರೆ, ಇದು ಟಿಎಂಸಿ ಕಾರ್ಯಕರ್ತರ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

Advertisement

ಎಲ್‌ಇಡಿ ಸ್ಫೋಟ
ಛತ್ತೀಸ್‌ಗಡದ ರಾಜನಂದಗಾಂವ್‌ ಜಿಲ್ಲೆಯಲ್ಲಿ ನಕ್ಸಲರು ಮತಗಟ್ಟೆ ಬಳಿ ಐಇಡಿ ಸ್ಫೋಟಿಸಿದ ಪರಿಣಾಮ, ಐಟಿಬಿಪಿ ಯೋಧರೊಬ್ಬರು ಗಾಯಗೊಂಡಿದ್ದಾರೆ. ತಮಿಳುನಾಡು, ಬಿಹಾರ, ಉ.ಪ್ರದೇಶ, ಮಹಾರಾಷ್ಟ್ರದ ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ, ಮತದಾರರ ಪಟ್ಟಿಯಲ್ಲಿ ಮಾಯವಾದ ಹೆಸರು ಮತ್ತಿತರ ವಿಚಾರಗಳು ಮತದಾರರ ಆಕ್ರೋಶಕ್ಕೆ ಕಾರಣವಾಗಿವೆ. ಮಹಾರಾಷ್ಟ್ರದ ನಾಂದೇಡ್‌ನ‌ಲ್ಲಿ 78 ಇವಿಎಂಗಳಲ್ಲಿ ಲೋಪ ಕಾಣಿಸಿಕೊಂಡಿವೆ.

ಚೌಕಿದಾರ್‌ ಚೋರ್‌ಅಭಿ ಯಾ ನಕ್ಕೆ ನಿಷೇಧ
ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿ ಬಳಸುತ್ತಿ ರುವ “ಚೌಕಿದಾರ್‌ ಚೋರ್‌ ಹೆ’ ಎಂಬ ಆಡಿಯೋ ಮತ್ತು ವಿಡಿಯೋ ಅಭಿಯಾನಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಚೌಕಿದಾರ್‌ ಚೋರ್‌ ಹೇ ಅಭಿಯಾನದಲ್ಲಿ ನಾವು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಹೀಗಾಗಿ ಈ ನಿರ್ಧಾರ ಮರುಪರಿಶೀಲಿಸುವಂತೆ ಆಯೋಗಕ್ಕೆ ಮನವಿ ಮಾಡುವುದಾಗಿ ಕಾಂಗ್ರೆಸ್‌ ಹೇಳಿದೆ.

ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌
“ಮೋದಿ ಎಂಬ ಅಡ್ಡ ಹೆಸರು ಇರುವವರೆಲ್ಲರೂ ಕಳ್ಳರೇ ಆಗಿರುವುದೇಕೆ’ ಎಂಬ ಹೇಳಿಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗೆ ಮುಳುವಾಗಿದೆ. ಈ ಹೇಳಿಕೆ ಖಂಡಿಸಿ ರಾಹುಲ್‌ ವಿರುದ್ಧ ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಗುರುವಾರ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಪಾಟ್ನಾ ಚೀಫ್ ಜ್ಯುಡೀಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್‌ ಅವರ ಈ ಹೇಳಿಕೆಯು “ಮೋದಿ’ ಎಂಬ ಅಡ್ಡ ಹೆಸರು ಇರುವವರ ಘನತೆಗೆ ಹಾನಿ ಉಂಟುಮಾಡಿದೆ ಎಂದು ಅವರು ದೂರಿದ್ದಾರೆ.

ಡಿಎಂಕೆ ಕಾರ್ಯಕರ್ತನ ಹತ್ಯೆ
ತಮಿಳುನಾಡಿನ ಮದುರೈನಲ್ಲಿ ಸಾರ್ವಜನಿಕವಾಗಿಯೇ ಡಿಎಂಕೆ ಕಾರ್ಯಕರ್ತರೊಬ್ಬ ರನ್ನು ಹತ್ಯೆಗೈದ ಘಟನೆ ಗುರುವಾರ ನಡೆದಿದೆ. ಎಐಎಡಿಎಂಕೆಯ ಕಾರ್ಯಕರ್ತರ ಗುಂಪೊಂದು ಎಂ.ಎಸ್‌. ಪಾಂಡ್ಯನ್‌ ಎಂಬವರನ್ನು ಥಳಿಸಿ, ಕೊಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಪಾಂಡ್ಯನ್‌ ಅವರು ಡಿಎಂಕೆ ವಲಯಾಧ್ಯಕ್ಷ ವಿ.ಕೆ. ಗುರುಸಾಮಿ ಅವರ ಸಂಬಂಧಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈ ಅಭ್ಯರ್ಥಿಗೆ ಮುಕೇಶ್‌ ಅಂಬಾನಿ ಬೆಂಬಲ
ಮುಂಬಯಿ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ ದೇವೊರಾಗೆ ಉದ್ಯಮಿಗಳಾದ ಮುಕೇಶ್‌ ಅಂಬಾನಿ ಹಾಗೂ ಬ್ಯಾಂಕರ್‌ ಉದಯ್‌ ಕೋಟಕ್‌ ಬೆಂಬಲ ಘೋಷಿಸಿದ್ದಾರೆ. ರಫೇಲ್‌ ಡೀಲ್‌ಗೆ ಸಂಬಂಧಿಸಿ ಮುಕೇಶ್‌ ಸಹೋದರ ಅನಿಲ್‌ ಅಂಬಾನಿ ವಿರುದ್ಧ ಕಾಂಗ್ರೆಸ್‌ ಆರೋಪ ಮಾಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇಬ್ಬರು ಉದ್ಯಮಿಗಳು ತಮಗೆ ಬೆಂಬಲ ಸೂಚಿಸಿರು ವಿಡಿಯೋವನ್ನು ಸ್ವತಃ ದೇವೊರಾ ಅವರೇ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇಲ್ಲಿ ದೇವೊರಾಗೆ ಪ್ರತಿಸ್ಪರ್ಧಿಯಾಗಿ ಶಿವಸೇನೆಯ ಅರವಿಂದ್‌ ಸಾವಂತ್‌ ಕಣಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next