Advertisement

ಇವಿಎಂ ಚರ್ಚೆ ಮುನ್ನೆಲೆಗೆ ಸಮಸ್ಯೆ ಬಗೆಹರಿಯಲಿ

06:00 AM May 30, 2018 | |

“ತಾಂತ್ರಿಕ ಸಮಸ್ಯೆಗಳು’ ಎಂದಾಕ್ಷಣ ಮತ ತಿರುಚುವುದು ಅಥವಾ ಒಂದೇ ಪಕ್ಷಕ್ಕೆ ಮತ ಹೋಗುವುದು ಎಂದಷ್ಟೇ ಅಲ್ಲವಲ್ಲ? ಈಗ ಎದುರಾಗಿರುವ ಸಮಸ್ಯೆಯೂ ಗಂಭೀರವಾದದ್ದೇ.

Advertisement

ಯಾವುದೇ ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನವೆಂಬ ಜನಾಧಿಕಾರವೇ ಪ್ರಜಾಪ್ರಭುತ್ವದ ಆಧಾರಸ್ತಂಭ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ಬಹುದೊಡ್ಡ ಸವಾಲು/ಜವಾಬ್ದಾರಿಯೆಂದರೆ ಚುನಾವಣೆಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತಿ ಪ್ರಕ್ರಿಯೆಯಾಗಿಸುವುದು. ಇದನ್ನು ಒಪ್ಪಿಕೊಂಡಾಗ ಸಹಜವಾಗಿಯೇ ಚುನಾವಣಾ ಪ್ರಕ್ರಿಯೆ ಅಥವಾ ಮತದಾನದ ವಿಷಯದಲ್ಲಿ ಸಂದೇಹಗಳು ಉದ್ಭವವಾದಾಗ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸೋಮವಾರ ವಿವಿಧ ರಾಜ್ಯಗಳಲ್ಲಿ ನಾಲ್ಕು ಲೋಕಸಭಾ ಸ್ಥಾನಕ್ಕೆ ಮತ್ತು ಹತ್ತು ವಿಧಾನಸಭಾ ಸೀಟುಗಳಿಗಾಗಿ ಉಪಚುನಾವಣೆಗಳು ನಡೆದವು. ಮತದಾನದ ಸಮಯದಲ್ಲಿ ಕೆಲವೆಡೆ ಇವಿಎಂ ಮಷಿನ್‌ಗಳು ಕೈಕೊಟ್ಟವೆಂಬ ವಿಚಾರವಾಗಿ ಈಗ ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಆರಂಭದಲ್ಲಿ ಚುನಾವಣಾ ಆಯೋಗ, “ಇವಿಎಂ ಹಾಳಾಗಿವೆಯೆಂದು ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತಿದೆ’ ಎಂಬ ಧಾಟಿಯಲ್ಲಿ ವಾದಿಸಿತಾದರೂ, ನಂತರ “ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿನ ಬಿಸಿ ವಾತಾವರಣದಿಂದಾಗಿ ಕೆಲವೆಡೆ ಇವಿಎಂ’ಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೂ ರಾಜಕೀಯ ಪಕ್ಷಗಳು- ಅದರಲ್ಲೂ ಕೆಲವು ವರ್ಷಗಳಿಂದ ಇವಿಎಂ ಅನ್ನು ವಿರೋಧಿಸುತ್ತಾ ಬರುತ್ತಿರುವ, ಆದರೆ ಅದರಲ್ಲಿ ದೋಷಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಪಕ್ಷಗಳು- ಪ್ರಸಕ್ತ ಘಟನೆಯ ಹಿಂದೆಯೂ ಕುತಂತ್ರವನ್ನು ಹುಡುಕುತ್ತಿವೆ. ವಿಪಕ್ಷಗಳ ಆರೋಪವೆಂದರೆ ಮುಸ್ಲಿಂ ಮತ್ತು ದಲಿತ ಬಾಹುಳ್ಯದ ಪ್ರದೇಶಗಳಲ್ಲೇ ಇವಿಎಂಗಳು ಹೆಚ್ಚು ಕೈಕೊಡುತ್ತಿವೆ ಎನ್ನುವುದು. ಏನೇ ಇದ್ದರೂ, ಇದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲೇಬೇಕಿದೆ. 

ಚುನಾವಣಾ ಆಯೋಗ ಇವಿಎಂಗಳು ತಾಂತ್ರಿಕ ರೂಪದಲ್ಲಿ ಫ‌ುಲ್‌ಪ್ರೂವ್‌ ಇವೆ, ಇವುಗಳನ್ನು ತಿರುಚಲು ಸಾಧ್ಯವೇ ಇಲ್ಲ ಎಂದು ಪದೇ ಪದೆ ಹೇಳುತ್ತಿದೆ. ಅದರ ಮಾತು ನಿಜವೆಂದು ಸಾಬೀತೂ ಆಗಿದೆ. ಆದರೂ ಅನೇಕ ರಾಜಕೀಯ ಪಕ್ಷಗಳ ಅನುಮಾನಗಳು ಅಥವಾ ಆರೋಪಗಳನ್ನು ಗಮನಿಸಿ ದೆಹಲಿ ಹೈಕೋರ್ಟ್‌ ಮತ್ತು ಸರ್ವೋಚ್ಚ ನ್ಯಾಯಾಲಯ ಇವಿಎಂಗಳಿಗೆ ವಿವಿಪ್ಯಾಟ್‌ ಸಂಪರ್ಕ ಕಲ್ಪಿಸುವುದನ್ನು ಕಡ್ಡಾಯ ಮಾಡಿವೆ. ಆದರೆ “ತಾಂತ್ರಿಕ ಸಮಸ್ಯೆಗಳು’ ಎಂದಾಕ್ಷಣ ಮತ ತಿರುಚುವುದು ಅಥವಾ ಒಂದೇ ಪಕ್ಷಕ್ಕೆ ಮತ ಹೋಗುವುದು ಎಂದಷ್ಟೇ ಅಲ್ಲವಲ್ಲ? ಈಗ ಎದುರಾಗಿರುವ ಸಮಸ್ಯೆಯೂ ಗಂಭೀರವಾದದ್ದೇ. ಬಿಸಿ ವಾತಾವರಣದಿಂದ ಮತಯಂತ್ರಗಳು ಕೈಕೊಟ್ಟರೆ ಚುನಾವಣಾ ಪ್ರಕ್ರಿಯೆಗಂತೂ ತುಸು ತಡೆ ಉಂಟಾಗುತ್ತದಲ್ಲವೇ? ಈಗಿನ ಆರೋಪಗಳನ್ನು ಗಮನದಲ್ಲಿಟ್ಟುಕೊಂಡ ಆಯೋಗ “ಪ್ರತಿಯೊಬ್ಬ ವ್ಯಕ್ತಿಯ ಮತ ನಮೂದಾಗುವವರೆಗೂ ಮತದಾನ ಚಾಲ್ತಿಯಲ್ಲಿರುತ್ತದೆ, ರಾತ್ರಿಯಾದರೂ ಪರವಾಗಿಲ್ಲ’ ಎಂದು ಭರವಸೆ ನೀಡಿತು. 

ಇದರ ಜೊತೆಗೆ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂಗಳಲ್ಲಿನ ದೋಷವನ್ನು ಪತ್ತೆಹಚ್ಚುವ ಮತ್ತು ತಾತ್ಕಾಲಿಕ ಸಮಸ್ಯೆಗಳನ್ನು ಪರಿಹರಿಸುವ ಕ್ಷಮತೆಯೂ ಇರಬೇಕು. ಈ ನಿಟ್ಟಿನಲ್ಲೂ ಚುನಾವಣಾ ಆಯೋಗ ಯೋಚಿಸಬೇಕಿದೆ. ಏಕೆಂದರೆ ಮತಯಂತ್ರ ನಿರ್ವಹಣೆಯಲ್ಲಿ ಗೊಂದಲ ಎದುರಾಗಿದ್ದರಿಂದಾಗಿ ವಿವಿಧೆಡೆ ಮತದಾನ ಪ್ರಕ್ರಿಯೆಗೆ ಸಮಸ್ಯೆಯಾಗಿರುವುದನ್ನು ನಾವು ನೋಡಿದ್ದೇವೆ. ನಾಲ್ಕು ಲೋಕಸಭಾ ಸ್ಥಾನಗಳು ಮತ್ತು ಹತ್ತು ವಿಧಾನಸಭಾ ಸ್ಥಾನಗಳಿಗಾಗಿ ನಡೆದ ಉಪಚುನಾವಣೆಯಲ್ಲೇ ಇಷ್ಟು ತೊಂದರೆಯಾಗುತ್ತದೆ ಎಂದರೆ, ಇಡೀ ದೇಶದಲ್ಲಿ ಏಕ ಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಈಗಲೇ ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. 

ಇನ್ನು ರಾಜಕೀಯ ಪಕ್ಷಗಳೂ ಇವಿಎಂಗಳಲ್ಲಿನ ಚಿಕ್ಕ ಪುಟ್ಟ ತಾಂತ್ರಿಕ ತೊಂದರೆಯನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂಥ ಅತಿರೇಕದ ವರ್ತನೆಗಳನ್ನು ಕೈಬಿಟ್ಟು ತಮ್ಮ ಸೋಲುಗಳಿಗೆ, ಹಿನ್ನಡೆಗೆ ನೈಜ ಕಾರಣಗಳನ್ನು ಹುಡುಕುವ ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಲಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next