Advertisement

ಎವಿಡೆನ್ಸ್‌ ಜೊತೆಬಂದವರು..

08:49 PM Sep 25, 2020 | Suhan S |

ಹೊಸತರ ಪ್ರಯೋಗಗಳನ್ನು ಮಾಡಲು ಬಯಸುವವರಿಗೆ ಸಿನಿಮಾದಲ್ಲಿ ಹತ್ತಾರು ಅವಕಾಶಗಳು ಇದ್ದೇ ಇರುತ್ತದೆ. ಇಂಥದ್ದೇ ಅವಕಾಶಗಳನ್ನು ಬಳಸಿಕೊಂಡು ಇಲ್ಲೊಂದು ಹೊಸಬರ ತಂಡ ಹೊಸ ಪ್ರಯೋಗದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಹೊರಟಿದೆ.

Advertisement

ಅಂದಹಾಗೆ, ಆ ಸಿನಿಮಾದ ಹೆಸರು “ಎವಿಡೆನ್ಸ್‌’. ಈ ಚಿತ್ರದ ವಿಶೇಷತೆ ಎಂದರೆ, ಕೇವಲ ಒಂದೇ ಲೊಕೇಶನ್‌ನಲ್ಲಿ, ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಸೆಟ್ಟೇರಿದ್ದ ಈ ಚಿತ್ರ ಕೇವಲ ಐದು ದಿನಗಳಲ್ಲಿ ತನ್ನ ಇಡೀ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಈಗ ಪೋಸ್ಟ್‌ ಪ್ರೊಡಕ್ಷನ್‌ಕೆಲಸಗಳಲ್ಲಿ ನಿರತವಾಗಿದೆ.  ಯುವ ಪ್ರತಿಭೆ ಪ್ರವೀಣ್‌ ರಾಮಕೃಷ್ಣ “ಎವಿಡೆನ್ಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇಂಥದ್ದೊಂದು ಸಿನಿಮಾ ಪ್ರಯೋಗದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರವೀಣ್‌ ರಾಮಕೃಷ್ಣ, “ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಇಂಥದ್ದೊಂದು ಸಿನಿಮಾ ಮಾಡಬಹುದಾ ಎಂಬ ಯೋಚನೆ ಬಂತು. ಅದರಂತೆ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಸ್ಕ್ರಿಪ್ಟ್ ಕೂಡ ಮಾಡಿಕೊಂಡೆವು. ಲಾಕ್‌ಡೌನ್‌ ತೆರವಾಗುತ್ತಿದ್ದಂತೆ, ನಮ್ಮ ಪ್ಲಾನ್‌ ಪ್ರಕಾರ ಒಂದೇ ಲೊಕೇಶನ್‌ನಲ್ಲಿ, ಎರಡು ಕ್ಯಾರೆಕ್ಟರ್‌ಗಳನ್ನು ಇಟ್ಟುಕೊಂಡು, ಐದು ದಿನಗಳಲ್ಲಿ ಶೂಟಿಂಗ್‌ ಪೂರ್ಣಗೊಳಿಸಿದ್ದೇವೆ. ಇದೊಂದು ಸಸ್ಪೆನ್ಸ್‌ ಕಂ ಕ್ರೈಂ – ಥ್ರಿಲ್ಲರ್‌ ಶೈಲಿಯ ಸಿನಿಮಾ. ಒಬ್ಬ ಆರೋಪಿ ಮತ್ತು ತನಿಖಾ ಅಧಿಕಾರಿಯ ನಡುವೆ ಹೇಗೆ ವಿಚಾರಣೆ ಪ್ರಕ್ರಿಯೆ ನಡೆಯುತ್ತದೆ ಅನ್ನೋದರ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎಂದು ವಿವರಣೆ ನೀಡುತ್ತಾರೆ.

“ಒಂದು ಸಿನಿಮಾವನ್ನು ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡುಕಟ್ಟಿಕೊಡುವುದು ನಿಜಕ್ಕೂ ಸವಾಲಿನಕೆಲಸ. ಇಲ್ಲಿಯವರೆಗೆ ಎಲ್ಲೂ ಅನಾವರಣಗೊಳ್ಳದ ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾವಸ್ತು ಈ ಸಿನಿಮಾದಲ್ಲಿದೆ. ನೋಡುಗರು ಒಂದು ಕ್ಷಣವೂ ಅತ್ತಿತ್ತ ನೋಡದಂತೆ ಹಿಡಿದಿಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಿದ್ದೇವೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ ನಿರ್ದೇಶಕ ಪ್ರವೀಣ್‌ ರಾಮಕೃಷ್ಣ. “ಧೃತಿ ಪ್ರೊಡಕ್ಷನ್ಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಎವಿಡೆನ್ಸ್‌’ ಚಿತ್ರದಲ್ಲಿ ಮಾನಸ ಜೋಶಿ ಮತ್ತು ರೋಬೋ ಗಣೇಶ್‌ ಎರಡು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next