Advertisement

ಪ್ರತಿಪಕ್ಷಗಳಿಗೆ ಮತದಾರರ ಮನ್ನಣೆ ಇದೆ ಎಂಬುದಕ್ಕೆ ಸಾಕ್ಷಿ: ಎಚ್‌.ಡಿ.ಕೆ.

09:49 AM Oct 25, 2019 | Team Udayavani |

ಬೆಂಗಳೂರು: ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮತದಾರರು ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿದ್ದರೂ ವಿಪಕ್ಷಗಳಿಗೂ ಮನ್ನಣೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ವಿಪಕ್ಷಗಳ ನಾಯಕರು ಪ್ರಚಾರ ಮಾಡದಂಥ ಸ್ಥಿತಿ ನಿರ್ಮಾಣ ಮಾಡಿ, ಎಲ್ಲರನ್ನೂ ಐಟಿ, ಇಡಿ, ಸಿಬಿಐ ಮೂಲಕ ಬೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬೇರೆ ಪಕ್ಷಗಳಿಗೆ ಅಭ್ಯರ್ಥಿಗಳೇ ಸಿಗಲಾರದಂಥ ಸ್ಥಿತಿ ನಿರ್ಮಾಣ ಮಾಡಿದ್ದರೂ ಜನತೆ ತಮ್ಮ ನಿರ್ಧಾರ ಏನು ಎಂಬುದನ್ನು ತೋರಿಸಿದ್ದಾರೆ. ಇದು ನಿಜವಾದ ಪ್ರಜಾಪ್ರಭುತ್ವ. ಬಿಜೆಪಿ ಯಾವ ರೀತಿ ಗೆಲುವು ಪಡೆದಿದೆ ಎಂಬುದು ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.

ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ ಜನತೆ ಅವರನ್ನೇ ಸೋಲಿಸಿದರು. ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು ಮತ್ತೂಮ್ಮೆ ಜೆಪಿ ಕ್ರಾಂತಿ ಆರಂಭವಾಗಬೇಕಾಗಿದೆ. ಇಂದು ಎರಡು ರಾಜ್ಯಗಳ ಫ‌ಲಿತಾಂಶದಿಂದ ವಿಪಕ್ಷಗಳ ನಾಯಕರು ಧೈರ್ಯದಿಂದ ಮಾತನಾಡಲು ಹೊರಗೆ ಬರುವಂತಾಗಿದೆ ಎಂದರು.

ಕಾಂಗ್ರೆಸ್‌ ನಾಯಕರು ಮಹಾರಾಷ್ಟ್ರ, ಹರಿಯಾಣದಲ್ಲಿ ಪ್ರಚಾರ ಮಾಡಲು ಬಿಟ್ಟಿರಲಿಲ್ಲ. ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ಅವರು ಮಾತ್ರ ಹೋರಾಟ ಮಾಡಿದ್ದರು. ಮಾಧ್ಯಮಗಳಲ್ಲಿ ಮತದಾನೋತ್ತರ ಸಮೀಕ್ಷೆಗಳಲ್ಲಿ ವಿಪಕ್ಷಗಳು ಕಡಿಮೆ ಸ್ಥಾನ ಗಳಿಸಲಿವೆ ಎಂದು ಹೇಳಲಾಗಿತ್ತು. ಎಲ್ಲವನ್ನೂ ಮತದಾರರು ಸುಳ್ಳು ಮಾಡಿದ್ದಾರೆ. ವಿಪಕ್ಷಗಳು ಅದರಲ್ಲೂ ಪ್ರಾದೇಶಿಕ ಪಕ್ಷಗಳು ಇರಬೇಕು ಎಂದು ಮತದಾರರು ಬಯಸಿರುವುದು ಫ‌ಲಿತಾಂಶದಿಂದ ಸಾಬೀತಾಗಿದೆ ಎಂದು ಹೇಳಿದರು.

ಗುಜರಾತ್‌ನಲ್ಲಿ ನಡೆದ ಉಪ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನೆಡೆಯಾಗಿದೆ. ಏನು ಮಾಡಿದರೂ ಮತದಾರರು ಒಪ್ಪುತ್ತಾರೆ ಎಂಬುದು ಭ್ರಮೆ ಎಂದು ತಿಳಿಸಿದರು.
ದೇಶದಲ್ಲಿ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ದ್ವೇಷದ ರಾಜಕಾರಣ ಯಾವ ರೀತಿ ನಡೆಯುತ್ತಿದೆ ಎಂಬುದು ಜನತೆಗೂ ಗೊತ್ತಿದೆ. ಇಂಥ ಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಒಂದು ಧ್ವನಿ ಎತ್ತುವ ನಾಯಕತ್ವ ಬೇಕಾಗಿದೆ. ಅದೇ ಕಾರಣಕ್ಕೆ ನಾನು ದೇವೇಗೌಡರನ್ನು ರಾಷ್ಟ್ರಮಟ್ಟದಲ್ಲಿ ವಿಪಕ್ಷಗಳ ನಾಯಕತ್ವ ವಹಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

Advertisement

ಜಮ್ಮು ಕಾಶ್ಮೀರದಲ್ಲಿ ಇಂದಿನ ಸ್ಥಿತಿ , ಅಲ್ಲಿನ ಜನತೆ ಅನುಭಸುತ್ತಿರುವ ಯಾತನೆ ಬಗ್ಗೆ ವೈದ್ಯರು, ಪತ್ರಕರ್ತರ ಸಹಿತ ನಾಲ್ವರು ಪುಸ್ತಕ ಬರೆದಿದ್ದಾರೆ. ಕೇಂದ್ರ ಸರಕಾರದ ತೀರ್ಮಾನಗಳಿಂದ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳು ಆತಂಕ ಹುಟ್ಟಿಸುತ್ತಿವೆ. ಹೊಸದೊಂದು ಹೋರಾಟ ನಡೆಯಲೇಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next