Advertisement
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಚಾರ ತಿಳಿಸಿದ್ದು, ಚಿದು ವಿರುದ್ಧ ಫೋರ್ಜರಿ ಕೇಸಿಗೆ ಸಂಬಂಧಿಸಿಯೂ ತನಿಖೆ ನಡೆಸುತ್ತಿದ್ದೇವೆ. ಇದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಆದರೆ, ಇಲ್ಲಿ ಶಿಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಾಗಿ, ಇಂಥ ಅಪರಾಧವು ಆರ್ಥಿಕ ಸ್ಥಿರತೆ, ಆರ್ಥಿಕತೆ, ಸಂಸ್ಥೆಗಳು ಮತ್ತು ಸಮಾಜದ ಮೇಲೆ ಬೀರುವ ಪರಿಣಾಮವನ್ನು ನಾವು ಗಮನಿಸಬೇಕಾ ಗುತ್ತದೆ ಎಂದು ಹೇಳಿದ್ದಾರೆ. ಆದರೆ, ಫೋರ್ಜರಿ ಕೇಸಿನ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.
ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಚಿದಂಬರಂ ತನಿಖೆ ಎದುರಿಸುತ್ತಿರುವ ನಡುವೆಯೇ, ಐಎನ್‌ಎಕ್ಸ್ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯಿಂದ ಅನುಮತಿ ನೀಡಿದ ಪ್ರಕರಣ ಸಂಬಂಧ ನೀತಿ ಆಯೋಗದ ಮಾಜಿ ಸಿಇಒ ಸಿಂಧುಶ್ರೀ ಖುಲ್ಲರ್ ಮತ್ತು ಇತರೆ ಮೂವರು ಮಾಜಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಅದರಂತೆ, ಖುಲ್ಲರ್ ಮಾತ್ರವಲ್ಲದೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವಾಲಯದ ಮಾಜಿ ಕಾರ್ಯದರ್ಶಿ ಅನೂಪ್ ಕೆ.ಪೂಜಾರಿ, ಹಣಕಾಸು ಸಚಿವಾಲಯದ ಅಂದಿನ ನಿರ್ದೇಶಕ ಪ್ರಬೋಧ್ ಸಕ್ಸೇನಾ, ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ರಬೀಂದ್ರ ಪ್ರಸಾದ್ ಅವರೂ ಸಿಬಿಐನಿಂದ ತನಿಖೆ ಎದುರಿಸಬೇಕಾಗಿದೆ. 2007ರಲ್ಲಿ ವಿದೇಶಗಳಿಂದ ದೇಣಿಗೆ ಪಡೆಯಲು ಐಎನ್‌ಎಕ್ಸ್ ಮೀಡಿಯಾಗೆ ಎಫ್ಐಪಿಬಿ ಅನುಮತಿಯನ್ನು ವಿತ್ತ ಸಚಿವಾಲಯ ನೀಡಿತ್ತು. ಆಗ ಚಿದಂಬರಂ ಅವರು ವಿತ್ತ ಸಚಿವರಾಗಿದ್ದರು. ಹೀಗಾಗಿ, ಅನುಮತಿ ನೀಡುವಲ್ಲಿ ಈ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯಲಿದೆ.