Advertisement

ನಗರದೆಲ್ಲೆಡೆ ವೈಭವದ ಏಕಾದಶಿ

12:18 PM Dec 18, 2018 | |

ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಮುಂಜಾನೆ ನಗರದ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಸೋಮವಾರ ಎಲ್ಲೆಡೆ ಸಿದ್ಧತೆಗಳು ಭರದಿಂದ ನಡೆದವು. ಹಲವು ದೇವಾಲಯಗಳು ಬಣ್ಣ , ಬಣ್ಣದ ವಿದ್ಯುತ್‌ ದೀಪಗಳಿಂದ ಸಿಂಗಾರಗೊಂಡು ಭಕ್ತರ ಚಿತ್ತಾಕರ್ಷಿಸಿದವು.

Advertisement

ಕೆ.ಆರ್‌.ರಸ್ತೆಯ ಐತಿಹಾಸಿಕ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ, ರಾಜಾಜಿನಗರದ ಇಸ್ಕಾನ್‌ ದೇಗುಲ, ಶ್ರೀನಗರದ ವೆಂಕಟರಮಣಸ್ವಾಮಿ ದೇವಾಲಯ, ಮಹಾಲಕ್ಷ್ಮಿಪುರದ ಶ್ರೀನಿವಾಸ ದೇವಾಲಯ, ಹೊಸಕೆರೆ ಹಳ್ಳಿಯ ಶ್ರೀದುರ್ಗಾ ಹಾಗೂ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಜೆ.ಪಿ.ನಗರದ ಮತ್ತು ಮಲ್ಲೇಶ್ವರದ ವೈಯಾಲಿ ಕಾವಲ್‌ನಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲ ಸೇರಿದಂತೆ ನಗರದ ಬಹುತೇಕ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಪೂಜೆ ಹಾಗೂ ಪ್ರಸಾದ ಸೇರಿದಂತೆ ಭಕ್ತರ ಸುಗಮ ದರ್ಶನಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

 ಏಕಾದಶಿಯ ಹಿನ್ನೆಲೆಯಲ್ಲಿ ಪ್ರಸಿದ್ಧ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಭಕ್ತರು ಸರತಿಯಲ್ಲಿ ಸಾಗಲು ದೇವಸ್ಥಾನದ ಆಡಳಿತ ಮಂಡಳಿ ಸೋಮವಾರದಂದೇ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಬೆಳಗಿನ ಜಾವ ಉತ್ಸವ: ಏಕಾದಶಿಯ ಹಿನ್ನೆಲೆಯಲ್ಲಿ ಸುಮಾರು 600 ವರ್ಷಗಳಷ್ಟು ಇತಿಹಾಸವಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಬಾಗಿಲು ಮಂಗಳವಾರ ರಾತ್ರಿ 1 ಗಂಟೆಗೆ ತೆರೆಯಲಿದ್ದು, ಈ ವೇಳೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ.

ಇದಾದ ಬಳಿಕ ಮುಂಜಾನೆ 2 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದ್ದು 3 ಗಂಟೆಗೆ ಉತ್ಸವ ಹೊರಡಲಿದೆ.  ರಥ ಬೀದಿಯಲ್ಲಿ ಸುಮಾರು ಒಂದು ಗಂಟೆಗಳಕಾಲ ಉತ್ಸವ ಸಾಗಲಿದ್ದು ಇದಾದ ಬಳಿಕ ಭಕ್ತರಿಗೆ ಪ್ರಸಾದ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರಾದ ವಾಸುದೇವ್‌ ಭಟ್ಟರ್‌ ಮಾಹಿತಿ ನೀಡಿದರು.

Advertisement

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ 1 ಗಂಟೆಯಿಂದ ಬುಧವಾರ ರಾತ್ರಿ 1 ಗಂಟೆಯವರೆಗೂ ದೇವಾಲಯದ ಬಾಗಿಲು ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ನಿತ್ಯರಾಧನೆಯೊಂದಿಗೆ ಪೂಜೆ ಆರಂಭವಾಗಲಿದ್ದು, ಬಳಿಕ ಸಾಲಿಗ್ರಾಮದ ಅಭಿಷೇಕ ನಡೆಯಲಿದೆ. ಹಾಲಿನ ನೈವೇದ್ಯ ಅರ್ಪಿಸಿದ ನಂತರ ಉತ್ಸವ ಮೂರ್ತಿಯನ್ನು ಕೂರಿಸಿ ವೈಕುಂಠದ ದ್ವಾರದವರೆಗೆ ಮೆರಣಿಗೆ ನಡೆಯಲಿದೆ ಭಕ್ತರಿಗೆ ಏಕಮುಖ ಸಂಚಾರ ವ್ಯವಸ್ಥೆಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ವಿಶೇಷ ದರ್ಶನದ ವ್ಯವಸ್ಥೆ ಇಲ್ಲ: ಮಲ್ಲೇಶ್ವರದ ವೈಯಾಲಿಕಾವಲ್‌ನ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದಲ್ಲೂ ಕೂಡ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರ ಸುಗಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 5 ಗಂಟಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಭಕ್ತ ಸಮೂಹ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಭಾರಿ ಯಾವುದೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿಲ್ಲ. ಎಂದು ತಿರುಮಲ ತಿರುಪತಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಕಾಧಿಕಾರಿ ಲಕ್ಷ್ಮಿಪತಿ ರೆಡ್ಡಿ ಹೇಳಿದ್ದಾರೆ.

ತಾರೆಯರ ಭೇಟಿ ಸಾಧ್ಯತೆ: ತಿರುಮಲ -ತಿರುಪತಿ ದೇವಸ್ಥಾನಕ್ಕೆ ಪ್ರತಿ ವರ್ಷ ಏಕಾದಶಿಯಂದು ಕೆಲವು ಹಿರಿತೆರೆ ಮತ್ತು ಕಿರುತೆರೆ ತಾರೆಗಳು ಭೇಟಿ ನೀಡುತ್ತಾರೆ. ರಾಜಕಾರಣಿಗಳು ಮತ್ತವರ ಪತ್ನಿಯರು ಕೂಡ ದರ್ಶನ ಪಡೆಯುತ್ತಾರೆ. ಕಳೆದ ಬಾರಿ ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌ ಅವರ ಕುಟುಂಬ ಭೇಟಿ ನೀಡಿತ್ತು. ಈ ವರ್ಷವು ಕೂಡ ಶಿವರಾಜ್‌ ಕುಮಾರ್‌ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ಇಸ್ಕಾನ್‌ ದೇವಾಲಯ: ವೈಕುಂಠ ಏಕಾದಶಿ ಪ್ರಯುಕ್ತ ಇಸ್ಕಾನ್‌ ದೇವಾಲಯದಲ್ಲಿ ಮಂಗಳವಾರ ಇಡೀ ದಿನ ದೇವರಿಗೆ ನಾನಾ ಸೇವೆಗಳು ನಡೆಯಲಿವೆ. ಬೆಳಗಿನ ಜಾವ 3 ಗಂಟೆಗೆ ಅಭಿಷೇಕ ನಡೆಯಲಿದೆ. ನಂತರ ಪುಷ್ಪಾಭಿಷೇಕ ಸೇರಿದಂತೆ 30 ಬಗೆಯ ಆರತಿ ಸೇವೆ ನಡೆಯಲಿವೆ. ಬೆಳಗ್ಗೆ 8 ರಿಂದ ರಾತ್ರಿ 11ರ ವರೆಗೂ ಭಕ್ತರು ದರ್ಶನ ಪಡೆಯಬಹುದಾಗಿದೆ. ವಿವಿಪುಂರನ ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿ ದೇಗುಲ, ಬನಶಂಕರಿ 2ನೇ ಹಂತದ ದೇವಗಿರಿ ಶ್ರೀನಿವಾಸ ದೇವಸ್ಥಾನ, ದಾಸನಪುರದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯ ಸೇರಿದಂತೆ ವಿವಿಧೆಡೆ ಪೂಜೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next