Advertisement
ಏನ್ ಮಾಡುತ್ತಿತ್ತು ಕೆಂಜಿರುವೆ ಗ್ಯಾಂಗು:ಒಂದಷ್ಟು ಇರುವೆಗಳ ಗುಂಪು ಗಟ್ಟಿಮುಟ್ಟಾದ ಚಿಗುರೆಲೆಯೊಂದನ್ನು ಹಿಡಿದುಕೊಂಡು, ತಮ್ಮ ಕುಡಿಮೀಸೆಯಿಂದ ಮತ್ತೂಂದು ಎಲೆಯೊಂದನ್ನು ಹಿಡಿದು ಕೂತಿರುವ ಗುಂಪಿಗೆ ಏನೋ ಸಂದೇಶ ರವಾನಿಸುತ್ತಿತ್ತು. ಒಟ್ಟಾರೆ ಆ ಎರಡೂ ತಂಡಗಳು ಆ ಎಲೆಗಳನ್ನು ಒಟ್ಟಾಗಿಸಲು ಸತತವಾಗಿ ಪ್ರಯತ್ನಿಸುತ್ತಾ, ಆ ಎಲೆ ತಮ್ಮ ಮೀಸೆ ತುದಿಯಿಂದ ಕೈ ಜಾರಿ ಹೋದರೂ ಚೂರು ಕುಗ್ಗದೇ ಮತ್ತೆ ತಮ್ಮ ಕಾರ್ಯ ಮುಂದುವರೆಸಿದವು. ಅವುಗಳು ಗೂಡು ಕಟ್ಟಲು ಪ್ಲ್ರಾನ್ ಮಾಡುತ್ತಿವೆ ಅಂತ ಗೊತ್ತಾಯಿತು. ಕೆಂಜಿರುವೆಗಳು ಸಾಮಾನ್ಯವಾಗಿ ಚಿಗುರೆಲೆಗಳನ್ನೇ ಆಯ್ದುಕೊಂಡು ಗೂಡು ಕಟ್ಟಲು ಮುಖ್ಯ ಕಾರಣವೆಂದರೆ ಚಿಗುರೆಲೆಗಳನ್ನು ಹೆಣೆಯೋದು ಸುಲಭ ಮತ್ತು ಅದು ಬೇಗ ಉದುರಿ ಹೋಗದು ಎನ್ನುವ ಕಾರಣಕ್ಕಾಗಿಯೇ. ಸುಮಾರು ಹತ್ತರಿಂದ ಇಪ್ಪತ್ತು ಎಲೆಗಳಿಲ್ಲದೇ ಹೋದರೆ ಇವುಗಳ ಗೃಹ ನಿರ್ಮಾಣ ಕಾರ್ಯ ನೆರವೇರುವುದಿಲ್ಲ. ತಾವು ಆಯ್ದುಕೊಂಡ ಎಲೆಗಳನ್ನು ಬಲು ತ್ರಾಸದಿಂದ ಪರಸ್ಪರ ಹತ್ತಿರತ್ತಿರ ತಂದ ಮೇಲೆ ಹೆಣ್ಣು ಇರುವೆಗಳು ತಮ್ಮ ಮರಿಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ಆ ಮರಿಗಳಿಂದ ಹೊರಸೂಸುವ ಬೆಳ್ಳಗಿನ ರೇಶೆ¾ ದಾರಗಳಿಂದ ಆ ಎಲೆಗಳನ್ನು ಸಾವಕಾಶವಾಗಿ ಹೆಣೆಯುತ್ತವೆ. ಕೆಲಸಗಾರ ಇರುವೆಗಳು ಹೆಣ್ಣು ಇರುವೆಗಳಿಗೆ ಸಾಥ್ ಕೊಟ್ಟು ಗೂಡನ್ನು ಸುಂದರಗೊಳಿಸುತ್ತವೆ. ಹೀಗೆ ಶುರುವಾಗುವ ಕೆಂಜಿರುವೆಗಳ ಮನೆ ಕಟ್ಟುವ ಕೆಲಸ ಮುಗಿಯಲು ಸುಮಾರು ಐದು ಗಂಟೆಗಳು ತಗಲುತ್ತದೆ. ಅಷ್ಟೊಂದು ತಾಳ್ಮೆ, ಹಿಡಿದ ಕೆಲಸವನ್ನು ಛಲ ಬಿಡದೇ ಮಾಡುವ ಗಟ್ಟಿತನ, ಇವೆಲ್ಲ ನಮಗೂ ಮಾದರಿ ಅಲ್ವಾ?
ಒಂದೊಂದು ಗೂಡುಗಳಲ್ಲಿಯೂ ಸಾಮಾನ್ಯವಾಗಿ ಐದು ಲಕ್ಷಕ್ಕಿಂತಲೂ ಜಾಸ್ತಿ ಕೆಂಜಿರುವೆಗಳು ಮೊಟ್ಟೆ ಇಟ್ಟು ಸಂಸಾರ ಮಾಡುತ್ತದಂತೆ. ನಾನು ಹಾಗೇ ನೋಡುತ್ತಾ ನಿಂತಿದ್ದೆ. ಆ ಕ್ರೋಟಾನು ಗಿಡದಲ್ಲಿ ಕೆಂಜಿರುವೆಗಳು ಆಗಲೇ ಎರಡು ಗೂಡು ಕಟ್ಟುತಚತಿದ್ದವು. ಸ್ವಲ್ಪ ಆಚೆ ತಿರುಗಿದರೆ ಮತ್ತೂಂದು ಕೆಂಬಣ್ಣದ ಎಲೆಗಳಿಂದ ಕಟ್ಟಿದ ಬಂಗಲೆ ಕಂಡಿತು. ಮರುದಿನ ನೋಡುತ್ತೇನೆ, ಅಲ್ಲಿ ಅಂಕು ಡೊಂಕಾದ ಪೂರಿಯ ಹಾಗೇ ಚಂದದ ಗೂಡು ನಿರ್ಮಾಣವಾಗಿತ್ತು. ಖುಷಿಯಿಂದ ನನ್ನ ಕ್ಯಾಮರಾ ಕಣ್ಣು ಝೂನ್ ಇನ್ ಆಯಿತು. ಕೆಂಜಿರುವೆಗಳ ಗುಂಪು ತಮ್ಮ ಕುಡಿ ಮೀಸೆಗಳಿಂದ ಉಳಿದ ಇರುವೆಗಳಿಗೆೆ ತಮ್ಮ ಗೃಹ ಪ್ರವೇಶಕ್ಕೆ ಆಮಂತ್ರಣ ಕೊಡುತ್ತಿತ್ತೋ ಏನೋ? ರಾಶಿ ಇರುವೆಗಳು ಕ್ಷಣಾರ್ಧದಲ್ಲೇ ಜಮಾಯಿಸಿದವು ಮತ್ತು ಎಲ್ಲವೂ ದುರದುರನೇ ಮನೆಯೊಳಗೇ ಹೋದುವು. ನೋಡಿದಿರಾ ಈ ಇರುವೆಗಳ ಬದುಕನ್ನಾ.ಇದೀಗ ಬೇಸಗೆ ರಜೆ ನಿಮ್ಮ ತೋಟದ ಮನೆಯಲ್ಲಿ ಕೆಂಜಿರುವೆ ಗೂಡ ಕಂಡರೆ ದೂರದಿಂದ ಗಮನಿಸಿ. ಗೂಡು ಮುಟ್ಟಲು ಹೋಗಿ ಇರುವೆಗಳಿಂದ ಕಚ್ಚಿಸಿಕೊಂಡಿರಾ ಮತ್ತೆ..
Related Articles
* ಕೆಂಜಿರುವೆಗಳ ಶಕ್ತಿ ಎಷ್ಟೆಂದರೆ ತಮಗಿಂತ ನೂರು ಪಟ್ಟು ಹೆಚ್ಚಿನ ಭಾರವನ್ನು ಎತ್ತಬಲ್ಲುದು.
*ಅವುಗಳಿಗೆ ಕಿವಿಯಿಲ್ಲ. ಹಾಗೆಂದ ಮಾತ್ರಕ್ಕೆ ಅವುಗಳನ್ನು ಕಿವುಡರೆಂದುಕೊಳ್ಳದಿರಿ. ಶಬ್ದವನ್ನು ಗ್ರಹಿಸಲು ಬೇರೆ ಮಾರ್ಗಗಳನ್ನು ಅನುಸರಿಸುತ್ತದೆ.
* ಒಂದೊಂದು ಗೂಡುಗಳಲ್ಲಿಯೂ ಸಾಮಾನ್ಯವಾಗಿ ಐದು ಲಕ್ಷಕ್ಕಿಂತಲೂ ಜಾಸ್ತಿ ಕೆಂಜಿರುವೆಗಳು ಮೊಟ್ಟೆ ಇಟ್ಟು ಸಂಸಾರ ಮಾಡುತ್ತದೆ.
* ಸಿದ್ದಿಜನಾಂಗದವರು ಕೆಂಜಿರುವೆಗಳನ್ನು ಬೇಟೆಯಾಡಿ ಅಡುಗೆ ಬಳಸುತ್ತಾರೆ.
* ಕೆಂಜಿರುವೆಗಳ ಬಾಯಲ್ಲಿ ಇರುವ ಫಾರ್ಮಿಕ್ ಆಸಿಡ್ ರಾಸಾಯನಿಕವನ್ನು ಸಂಧಿವಾತ, ಕೀಲು ರೋಗಗಳ ನಿವಾರಣೆಗಾಗಿಯೂ ಬಳಸುತ್ತಾರಂತೆ.
*ಇರುವೆಗಳಲ್ಲಿ ಸುಮಾರು 12,000 ಪ್ರಭೇಧಗಳಿವೆ. ಅವುಗಳಲ್ಲಿ ಗೂಡು ಹೆಣೆಯುವ ಜಾಣ ಇರುವೆಗಳಲ್ಲಿ ಕೆಂಜಿರುವೆಗಳೇ ಮುಂದು.
Advertisement
– ಪ್ರಸಾದ್ ಶೆಣೈ ಆರ್. ಕೆ., ಕಾರ್ಕಳ