Advertisement
ಈ ಸಂಬಂಧ ಸ್ಪಷ್ಟನೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೋವಿಡ್ 19 ಭೀತಿ, ಸಮಯದ ಅಭಾವದಿಂದಾಗಿ ಪ್ರಶ್ನೋತ್ತರ, ಶೂನ್ಯವೇಳೆಯ ಅವಧಿ ಕಡಿತದ ಬಗ್ಗೆ ಮೊದಲೇ ವಿಪಕ್ಷ ನಾಯಕರ ಜತೆ ಚರ್ಚಿಸಲಾಗಿತ್ತು. ಆಗ ಒಪ್ಪಿಗೆಯನ್ನೂ ನೀಡಿದ್ದರು. ಪ್ರಶ್ನೋತ್ತರ ಅವಧಿಯನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿಲ್ಲ, ಲಿಖಿತವಾಗಿ ಸಂಸದರ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ ಎಂದಿದ್ದಾರೆ.
ಪ್ರಶ್ನೋತ್ತರಗಳಿಗೆ ಸಿದ್ಧಗೊಳ್ಳಲು ಸಚಿವರು ಸಂಸತ್ತಿನ ತಮ್ಮ ಕಚೇರಿಗಳಿಗೆ ತಮ್ಮ ಇಲಾಖೆಯ ಹಲವಾರು ಅಧಿಕಾರಿಗಳನ್ನು ಕರೆಯಿಸಿಕೊಂಡು ಸಮಾಲೋಚಿಸಬೇಕಾಗುತ್ತದೆ. ಇದರಿಂದ ಸಂಸತ್ತಿಗೆ ಬಂದು ಹೋಗುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಹಾಗಾಗಿ ಈ ಬಾರಿ ಅವನ್ನು ಕೈಬಿಡಲಾಗಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ತಮಗೆ ತಿಳಿಸಿರುವುದಾಗಿ ವಿಪಕ್ಷಗಳ ಸದಸ್ಯರು ಹೇಳಿದ್ದಾರೆ. ನಾಯ್ಡುಗೆ ಬಿನೋಯ್ ಪತ್ರ
ಸರಕಾರದ ಈ ಕ್ರಮ ವಿರೋಧಿಸಿರುವ ರಾಜ್ಯಸಭಾ ಸದಸ್ಯ ಬಿನೋಯ್ ವಿಸ್ವಂ, ರಾಜ್ಯ ಸಭಾಪತಿಯಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಕೆಲವು ನಿಬಂಧನೆಗಳಿಂದ ನಡೆಸಲಾಗುತ್ತಿದ್ದರೂ ಯಾವಾಗಲೂ ನಡೆಯುತ್ತಿರುವ ಕಲಾಪಗಳಂತೆಯೇ ಈ ಬಾರಿಯೂ ನಡೆಯಲಿದೆ. ಹಾಗಿರುವಾಗ ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯ ಕಲಾಪ ಎಂದಿನಂತೆ ನಡೆಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.