Advertisement

ದುಡಿಯದೇ ಎಲ್ಲವೂ ಬೇಕೆನ್ನುವ ಮನೋಭಾವ ಸಲ್ಲ

03:09 PM Apr 21, 2017 | Team Udayavani |

ಹುಬ್ಬಳ್ಳಿ: ಮನುಷ್ಯ ಇಂದು ದುಡಿಯದೇ ಎಲ್ಲವೂ ಬೇಕು ಎನ್ನುವ ಮನೋಭಾವ ಹೊಂದಿದ್ದಾನೆ. ಹೀಗಾಗಿ ಅನಾಚಾರ, ಅಪರಾಧಗಳು ಹೆಚ್ಚುತ್ತಿವೆ. ಆ ಮೂಲಕ ದುಃಖದಲ್ಲಿ ಮುಳುಗುತ್ತಿದ್ದಾನೆ ಎಂದು ಜಂಗಲ್‌ವಾಲೇ ಬಾಬಾ ಖ್ಯಾತಿಯ ಚಿನ್ಮಯಸಾಗರ ಮಹಾರಾಜರು ನುಡಿದರು. 

Advertisement

ಇಲ್ಲಿನ ಮಹಾವೀರ ಗಲ್ಲಿಯ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಆದಿನಾಥ ದಿಗಂಬರ ಜಿನಮಂದಿರ ಸೇವಾ ಟ್ರಸ್ಟ್‌ ಕಮೀಟಿಯಿಂದ ಆಯೋಜಿಸಿದ್ದ ಕಂಚಗಾರಗಲ್ಲಿಯ ಭಗವಾನ ಆದಿನಾಥ ದಿಗಂಬರ ಜೈನ ಬಸದಿಯ 77ನೇ ವಾರ್ಷಿಕ ಪೂಜೆಯ ಧರ್ಮಸಭೆಯಲ್ಲಿ ಶ್ರೀಗಳು ಮಾತನಾಡಿದರು. 

ಒಡಹುಟ್ಟಿದವರು, ಸಂಬಂಧಿಗಳು ಎನ್ನದೆ ಎಲ್ಲವೂ ನನಗೆ ಬೇಕು. ನನ್ನಿಂದ ಯಾರಿಗೆ ನೋವಾಗುತ್ತಿದೆ ಎಂಬುದನ್ನು ಮರೆತು ತನಗೇ ಬೇಕು ಎಂಬ ಭಾವನೆ ಬೆಳೆಸಿಕೊಳ್ಳುತ್ತಿದ್ದಾರೆ. ಯಾರೂ ಯಾರ ದುಃಖದಲ್ಲೂ ಸಹಭಾಗಿಗಳಾಗುತ್ತಿಲ್ಲ. ಅತೀ ಆಸೆಗೊಳಪಟ್ಟು ಸ್ವಾರ್ಥಿಗಳಾಗಿ ಬದುಕುತ್ತಿದ್ದಾರೆ.

ತಮ್ಮನ್ನೆ ತಾವು ದುಃಖದಲ್ಲಿ ಮುಳುಗಿಸಿಕೊಳ್ಳುತ್ತಿದ್ದಾರೆ. ಜೊತೆಗೆ ದುಡಿದ ಹಣವನ್ನೆಲ್ಲ ದುಶ್ಚಟಕ್ಕೆ ಹಾಕುತ್ತಿದ್ದಾರೆ. ದುಡಿದ ಹಣ ದುಶ್ಚಟಕ್ಕೆ ಹಾಕಿ ದುಃಖ ತಂದುಕೊಳ್ಳಬೇಡಿ ಎಂದು ಹೇಳುವ ಸ್ಥಿತಿ ಬಂದಿದೆ ಎಂದರು. ಮೈಸೂರಿನ ಪ್ರಾಕೃತ ವಿದ್ವಾಂಸ ಪ್ರೊ| ಶುಭಚಂದ್ರ ಮಾತನಾಡಿ, ದೇವರ ಬಳಿ ಬೇಡಿಕೊಳ್ಳಲು ನಾವು ಭಿಕ್ಷುಕರಲ್ಲ.

ಆತ ಮಾರ್ಗದರ್ಶಕನಾಗಿದ್ದಾನೆ. ಆತನ ಗುಣಗಳನ್ನು ಸ್ತುತಿ ಮಾಡುವುದರಿಂದ ನಮ್ಮ ಎಲ್ಲ ಕಾಮನೆಗಳು ಈಡೇರುತ್ತವೆ. ವೃಷಭೇಂದ್ರ ತೀರ್ಥಂಕರರು ಮಾನವ ದುಡಿದು ತಿನ್ನಬೇಕು. ಕೃಷಿ, ವಾಣಿಜ್ಯ, ಶಿಲ್ಪ ಸೇರಿ ಆರು ವಿದ್ಯೆಗಳನ್ನು ಕಲಿಸಿದರು. ಜಗತ್ತಿನ ಆದಿ ಕೃಷಿ ಶಿಕ್ಷಕ ಎಂಬ ಬಿರುದು ಅವರಿಗೆ ಸಲ್ಲುತ್ತದೆ. ಧರ್ಮದಿಂದ ದುಡಿದು ಸಾರ್ಥಕ ಜೀವನ ಸಾಗಿಸುವಂತೆ ತಿಳಿಸಿದರು.

Advertisement

ಆದ್ದರಿಂದ ಅವರ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತಕ್ಕೆ ಆದಿನಾಥ ತೀರ್ಥಂಕರರ ಮಗನಾದ ಭರತನಿಂದಲೇ ಭರತ ವರ್ಷ ಎಂಬ ಹೆಸರು ಬಂತು ಎಂದರು. ಬಸದಿ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಅಧ್ಯಕ್ಷತೆ ವಹಿಸಿದ್ದರು.

ಮಹಾವೀರ ಸೂಜಿ, ವಿಮಲ ತಾಳಿಕೋಟಿ, ಕುಶಾಲ ಆಣೇಕಾರ, ತ್ರಿಶಲಾ ಮಾಲಗತ್ತಿ, ಶ್ರೇಣಿಕರಾಜ್‌ ರಾಜಮಾನೆ, ಅಜಿತ ಕಲಘಟಗಿ, ಡಾ| ಪದ್ಮರಾಜ ಜವಳಿ, ಸುಮಲತಾ, ವಿಮಲಾಬಾಯಿ, ಪದ್ಮರಾಜ ಕಲಘಟಗಿ ಇದ್ದರು. ಸರೋಜ ಹೋತಪೇಟಿ, ಸ್ವರೂಪ ಉಮಚಗಿ ಪ್ರಾರ್ಥಿಸಿದರು. ಆರ್‌.ಟಿ. ತವನಪ್ಪನವರ ನಿರೂಪಿಸಿದರು. 

ನಂತರ ಚಾಮರಾಜನಗರದ ಅಕ್ಷತಾ ಜೈನ ಮತ್ತು ತಂಡದವರಿಂದ “ಭರತ ಬಾಹುಬಲಿ’ ನೃತ್ಯ ರೂಪಕ ನಡೆಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಆದಿನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಆನೆ ಮೇಲೆ ಆಗಮ ಗ್ರಂಥಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಭಕ್ತಾಮರ ವಿಧಾನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  

Advertisement

Udayavani is now on Telegram. Click here to join our channel and stay updated with the latest news.

Next