Advertisement

3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ

11:49 PM May 16, 2024 | Team Udayavani |

ಹೊಸದಿಲ್ಲಿ: ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ರೂಪುರೇಷೆ ಸಿದ್ಧವಾಗಿದೆ. ಜತೆಗೆ ದೇಶದ ಯುವ ಜನತೆಯನ್ನು ಗಮನದಲ್ಲಿ ಇರಿಸಿಕೊಂಡು ಮತ್ತೆ 25 ದಿನಗಳ ಯೋಜನೆ ಸೇರ್ಪಡೆಗೊಳಿಸಲು ಚಿಂತಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದ ರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಚುನಾ ವಣ ಪ್ರಚಾರದ ವೇಳೆ ಮೊದಲ ಬಾರಿಯ ಮತದಾರರು ಮತ್ತು ಯುವ ಜನರ ಉತ್ಸಾಹವನ್ನು ಕಂಡ ಬಳಿಕ ಮೊದಲ 100 ದಿನಗಳ ರೂಪುರೇಷೆಗೆ ಮತ್ತೆ 25 ದಿನಗಳನ್ನು ಸೇರಿಸುವ ಅಗತ್ಯ ಉಂಟಾಯಿತು ಎಂದಿದ್ದಾರೆ.

ನಾನು ಯವ ಜನರ ಸ್ಫೂರ್ತಿಯನ್ನು ಬಲ್ಲೆ. ಆದ್ದರಿಂದಲೇ ನಾನು 125 ದಿನಗಳ ಯೋಜನೆಯನ್ನು ಸಿದ್ಧಪಡಿಸಬೇಕಾಯಿತು.

2047ರ ವಿಕಸಿತ ಭಾರತದ ಪಯಣದಲ್ಲಿ ದೇಶದ ಜನರು ತಮ್ಮ ಆಲೋಚನೆಗಳನ್ನು ಹೇಳಬೇಕು ಮತ್ತು ತಮ್ಮ ಆದ್ಯತೆಗಳನ್ನು ತಿಳಿಸಬೇಕು. ಅಭಿವೃದ್ಧಿಯ ಪಯಣದಲ್ಲಿ ಯುವ ಜನತೆ ಭಾಗೀದಾರರಾಗಬೇಕು ಎಂದು ನಾನು ಬಯಸುತ್ತೇನೆ ಎಂದರು.

2014ರಲ್ಲಿ 5 ವರ್ಷಗಳಿಗಾಗಿ ನಾನು ಚುನಾವಣ ಪ್ರಣಾಳಿಕೆ ರೂಪಿ ಸಿದ್ದೆ. 2019ರಲ್ಲಿ ನಾನು ಜಗತ್ತಿನ ಗಮನ ಸೆಳೆದೆ. 2024ರಲ್ಲಿ ನನ್ನ ಯೋಜನೆ ಸ್ವಲ್ಪ ದೊಡ್ಡದು ಮತ್ತು ದೀರ್ಘಾವಧಿಗೆ ಸಂಬಂಧಿಸಿದ್ದಾಗಿದೆ. ಇದಕ್ಕಾಗಿ 5 ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ಕೆಲಸ ಮಾಡುತ್ತ ಎರಡು ತಲೆಮಾರಿನ ಅಧಿಕಾರಿಗಳು ನಿವೃತ್ತರಾಗಿದ್ದಾರೆ ಮತ್ತು ಅನೇಕ ಹೊಸ ಅಧಿಕಾರಿಗಳು ಜತೆಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ಕೆಲಸಕ್ಕೆ ಬಾರದಂತಿದ್ದ ಇ.ಡಿ.!
2014ಕ್ಕಿಂತ ಹಿಂದೆ ಜಾರಿ ನಿರ್ದೇಶ ನಾಲಯ (ಇ.ಡಿ.) ಕೆಲಸಕ್ಕೆ ಬಾರದ ಸಂಸ್ಥೆಯಂತಿತ್ತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅದು ತನ್ನ ನೈಜ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಮೋದಿ ಹೇಳಿದರು. 2004ರಿಂದ 2014ರ ವರೆಗೂ ಅದೇ ಇ.ಡಿ., ಅದೇ ಕಾನೂನು ಇತ್ತು ಅಲ್ಲವೇ? ನಾನೇನು ಹೊಸ ಕಾನೂನು ಮಾಡಿಲ್ಲ. ಅಷ್ಟೇ ಯಾಕೆ, ಇ.ಡಿ. ಕೂಡ ನಾನು ರಚಿಸಿದ್ದಲ್ಲ. ಆಗ ಅದು ಕೇವಲ 34ರಿಂದ 35 ಲಕ್ಷ ರೂ.ಗಳನ್ನಷ್ಟೇ ವಶಕ್ಕೆ ಪಡೆದಿತ್ತು. ನಾವು ವಿಪಕ್ಷವಾಗಿದ್ದಾಗ, ಇ.ಡಿ. ಬಳಕೆ ಮಾಡದಂತೆ ಅವರನ್ನು (ವಿಪಕ್ಷಗಳು) ಯಾರಾದರೂ ತಡೆದಿದ್ದರೇ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲೇ ಚುನಾವಣ ಆಯೋಗ ಸ್ವತಂತ್ರ
ಕಾಂಗ್ರೆಸ್‌ ಆಡಳಿತದಲ್ಲಿ ಚುನಾವಣ ಆಯೋಗ ಸರಕಾರದ ಅಧೀನದಲ್ಲಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಯೋಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೋದಿ ಹೇಳಿದರು. 50ರಿಂದ 60 ವರ್ಷ ಆಯೋಗ ಒಬ್ಬರೇ ಸದಸ್ಯರನ್ನು ಹೊಂದಿತ್ತು. ಬಳಿಕ ಆಯೋಗದಿಂದ ಹೊರ ಬಂದವರು ರಾಜ್ಯಪಾಲರು ಆಗುತ್ತಿದ್ದರು ಇಲ್ಲವೇ ಸಂಸದರಾಗುತ್ತಿದ್ದರು ಇಲ್ಲವೇ ಎಲ್‌.ಕೆ. ಆಡ್ವಾಣಿ ವಿರುದ್ಧ ಸ್ಪರ್ಧಿಸುತ್ತಿದ್ದರು. ಅಂದಿನ ಕಾಲದ ಚುನಾವಣ ಆಯುಕ್ತರು ಈಗಲೂ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ವನ್ನು ಟ್ವೀಟ್‌ ಮಾಡುತ್ತಾರೆ ಮತ್ತು ಲೇಖನಗಳನ್ನು ಬರೆಯುತ್ತಾರೆ. ಇದನ್ನೆಲ್ಲ ಗಮನಿಸಿದರೆ ಈಗ ಚು. ಆಯೋಗವು ಸಂಪೂರ್ಣ ಸ್ವತಂತ್ರವಾಗಿದೆ ಎಂದರು.

ಇ.ಡಿ. ವಶವಾದ ಹಣ ಬಡವರಿಗೆ ಹಂಚಲು ನ್ಯಾಯ ಸಂಹಿತೆಯಲ್ಲಿ ಅವಕಾಶ!
ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲವರು ಜನರ ಹಣವನ್ನು ಲೂಟಿ ಮಾಡಿದ್ದಾರೆ. ಅದೇ ಹಣವನ್ನು ವಾಪಸ್‌ ಜನರಿಗೆ ನೀಡುತ್ತೇನೆ. ಇ.ಡಿ. ಸಹಿತ ಸರಕಾರಿ ತನಿಖಾ ಸಂಸ್ಥೆಗಳು ಸುಮಾರು 1.25 ಲಕ್ಷ ಕೋ.ರೂ. ಜಪ್ತಿ ಮಾಡಿವೆ. ಈ ಹಣವನ್ನು ಬಡವರಿಗೆ ನೀಡುವ ಸಂಬಂಧ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇನೆ. ಅಗತ್ಯ ಬಿದ್ದರೆ ಇದಕ್ಕಾಗಿ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವೆ. ಅಲ್ಲದೆ ಭಾರತೀಯ ದಂಡ ಸಂಹಿತೆಯ ಬದಲಾಗಿ ಜಾರಿಗೆ ಬಂದಿರುವ ಹೊಸ ನ್ಯಾಯ ಸಂಹಿತೆಯಲ್ಲಿ ಬಡವರಿಗೆ ಹಣ ಹಂಚುವ ಕುರಿತು ಕೆಲವು ವಿಧಿಗಳಲ್ಲಿ ಅವಕಾಶ ಕಲ್ಪಿಸುತ್ತೇವೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next