Advertisement

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

12:05 AM May 18, 2024 | Team Udayavani |

ಕಾರ್ಕಳ: ಕೃಷಿಯ ಮೇಲಿನ ಸೆಳೆತದಿಂದ ವಿದೇಶದ ಉದ್ಯೋಗವನ್ನು ತ್ಯಜಿಸಿ ಹುಟ್ಟೂರಿಗೆ ಮರಳಿದ ವ್ಯಕ್ತಿಯೊಬ್ಬರು ಮಾದರಿ ಕೃಷಿಯ ಮೂಲಕ ಸಾಧನೆ ಮಾಡಿದ್ದಾರೆ.

Advertisement

ಕಾರ್ಕಳದ ಸಾಣೂರಿನ ಆಂಥೋನಿ ಎಲಿಯಾ ಡಿ’ಸಿಲ್ವ ಪ್ರಾಥಮಿಕ ಶಿಕ್ಷಣವನ್ನು ಸಾಣೂರಿನಲ್ಲಿ, ಮುಂಬಯಿ ಯಲ್ಲಿ ಸಂಜೆ ಕಾಲೇಜು ಶಿಕ್ಷಣ ಮುಗಿಸಿ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರು. ಆದರೆ ಕೃಷಿ ಪ್ರೀತಿ ಹುಟ್ಟೂರಿಗೆ ಮರಳುವಂತೆ ಮಾಡಿತು. 22 ವರುಷಗಳ ಹಿಂದೆ ಸಾಣೂರಿನಲ್ಲಿ ಮೂರೂವರೆ ಎಕರೆ ಬರಡು ಭೂಮಿ ಖರೀದಿಸಿ ವಿದೇಶದಲ್ಲಿ ಗಳಿಸಿದ ಹಣವನ್ನು ವ್ಯಯಿಸಿ ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ಪ್ರಸ್ತುತ ಯಶಸ್ವಿ ಕೃಷಿಕ ಎನಿಸಿದ್ದಾರೆ.

ನಳನಳಿಸುವ ಸಸ್ಯಗಳು
ಮೂರೂವರೆ ಎಕರೆ ಭೂಮಿ ಯಲ್ಲಿ 70ಕ್ಕೂ ಅಧಿಕ ವಿವಿಧ ತಳಿಯ ಹಣ್ಣಿನ ಗಿಡ ಗಳನ್ನು ಬೆಳೆಸಿ ದ್ದಾರೆ. ಮಾವು, ಹಲಸು, ಅನಾನಸ್‌, ಡ್ರಾಗನ್‌ ಫ‌ೂಟ್ಸ್‌, ಮ್ಯಾಂಗೋಸ್ಟೀನ್‌, ರಂಬೂಟನ್‌, ಪೇರಳೆ, ಚಿಕ್ಕು ಸಹಿತ ದೇಶ ವಿದೇಶದ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ನೀರು, ಗೊಬ್ಬರ ಎಲ್ಲವನ್ನು ವ್ಯವಸ್ಥಿತವಾಗಿ ಕೃಷಿಯಲ್ಲಿ ಜೋಡಿಸಿಕೊಂಡಿದ್ದಾರೆ.

ಸ್ವತಃ ಮಾರಾಟ
ಸಾವಯವ ಗೊಬ್ಬರ ಬಳಸುವುದರಿಂದ ಹಣ್ಣುಗಳು ಸತ್ವಭರಿತವಾಗಿದ್ದು, ಇವರು ಬೆಳೆದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ಮಂಗಳೂರಿನಲ್ಲಿ ಮನೆ ಹೊಂದಿರುವ ಅವರು ಹತ್ತಿರದಲ್ಲಿ ಒಂದು ಅಂಗಡಿಯನ್ನು ಖರೀದಿಸಿ ಸ್ವತಃ ಮಾರಾಟ ಮಾಡುತ್ತಾರೆ. ಹಳ್ಳಿಗರಿಗೆ ಸಾವಯವ ಹಣ್ಣು ಸಾಮಾನ್ಯವಾಗಿ ದೊರಕುತ್ತದೆ. ಆದರೆ ನಗರವಾಸಿಗಳು ವಿಷಯುಕ್ತ ಆಹಾರವನ್ನೇ ಸೇವಿಸುವ ಅನಿವಾರ್ಯ ಎದುರಾಗಿದ್ದು, ಅವರು ಕೂಡ ಸಾವಯವ ಹಣ್ಣು ಸವಿಯಬೇಕು ಎನ್ನುವುದು ನನ್ನ ಉದ್ದೇಶ ಎನ್ನುತ್ತಾರೆ ಅವರು. ಹಣ್ಣಿನ ತೋಟ ವೀಕ್ಷಣೆಗೆ ಬರುವವರು ಗಿಡ ಕೇಳುತ್ತಾರೆ ಅನ್ನುವ ಕಾರಣಕ್ಕೆ ಈ ವರ್ಷ ನರ್ಸರಿ ಕೂಡ ಆರಂಭಿಸುವ ಚಿಂತನೆ ಹೊಂದಿದ್ದಾರೆ.

ಶ್ರೇಷ್ಠ ಕೃಷಿಕ ಪ್ರಶಸ್ತಿ
ಆಂಥೋನಿ ಎಲಿಯಾ ಡಿ’ಸಿಲ್ವ ಅವರ ತೋಟಕ್ಕೆ ಹಲವಾರು ಕೃಷಿ ಆಸಕ್ತರು ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಹಲವು ಸಂಘ-ಸಂಸ್ಥೆಗಳು ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಕೃಷಿ ಇಲಾಖೆಯು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

ಕೃಷಿ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದೇ ಆಸಕ್ತಿಯಿಂದ ಹಣ್ಣುಗಳನ್ನು ಬೆಳೆದಿದ್ದೇನೆ. ಈ ಸಲ ಮಳೆ ಇಲ್ಲದೆ ಹೂಬಿಡುವಲ್ಲಿ ತೊಂದರೆಯಾಗಿ ಸ್ವಲ್ಪ ಸಮಸ್ಯೆಯಾಗಿದೆ. ಆದರೇ ಧೃತಿಗೆಡುವಂಥದ್ದೇನಿಲ್ಲ. ಮುಂದಿನ ಬಾರಿಗೆ ಉತ್ತಮ ಇಳುವರಿ ನಿರೀಕ್ಷೆ ಇದೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ಶ್ರಮಪಟ್ಟು ದುಡಿದರೆ ಸೋಲು ಹತ್ತಿರ ಸುಳಿಯುವುದಿಲ್ಲ.
– ಆಂಥೋನಿ ಎಲಿಯಾ ಡಿ’ಸಿಲ್ವ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next