ಶೃಂಗೇರಿ: ಕಲೆ ಮತ್ತು ಸಂಸ್ಕೃತಿಯು ಸ್ವಾಸ್ಥ್ಯ ಸಮಾಜದ ಕುರುಹುಗಳಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಹೇಳಿದರು. ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೆನಾಡು ಉತ್ಸವವನ್ನು ಭತ್ತ ಕೇರುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಲೆನಾಡು ಸಾಂಸ್ಕೃತಿಕವಾಗಿ ಅಪಾರವಾದ ಜಾನಪದ ಸಂಪತ್ತನ್ನು ಹೊಂದಿದೆ. ರಂಗಭೂಮಿ ಶತಮಾನಗಳ ಇತಿಹಾಸದ ಹಿರಿಮೆ ಪಡೆದಿದೆ ಎಂದರು.
ಸಮಾಜ ಸೇವಕಿ ಶ್ಯಾಮಲಾ ರಂಗನಾಥ್ ಮಾತನಾಡಿ, ಉತ್ಸವ ಸಂಚಾಲಕ ಎಸ್.ಎನ್. ವಿಶ್ವನಾಥ್, ಕೊಟ್ಟು ಶ್ಯಾಮಲ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಇಂದಿನ ಸ್ವಾರ್ಥಪರ ಪ್ರಪಂಚದಲ್ಲಿ ಒಂದು ವಿಶೇಷವಾದ ಸ್ಥಾನ ಪಡೆದಿದೆ. ಮಲೆನಾಡಿನ ಗೃಹಿಣಿಯರನ್ನು ಅವರು ಸೃಜನಶೀಲತೆಯ ಕಡೆಗೆ ಸೆಳೆದೊಯ್ಯುತ್ತಿದ್ದ ಪರಿ ಅವರ ವ್ಯಕ್ತಿತ್ವದ ಕನ್ನಡಿಯಾಗಿದೆ ಎಂದರು.
ಮಹಿಳೆಯರಿಗೆ ಸಮಾಜಮುಖೀ ಕಾರ್ಯಕ್ಕೆ ಪ್ರೇರಣೆ ಒದಗಿಸುತ್ತಿದ್ದ ಅಪರೂಪದ ವ್ಯಕ್ತಿ ಶ್ಯಾಮಲಾ. ಇಂತಹ ಕ್ರಿಯಾಶೀಲ ಮಹಿಳೆಯನ್ನು ಸ್ಮರಿಸುವ ಮೂಲಕ ಮಲೆನಾಡು ಉತ್ಸವ ಮಹಿಳೆಯರಿಗೂ ಪ್ರಾಮುಖ್ಯ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಕುಳಿ ವೆಂಕಟೇಶ್, ಮಲೆನಾಡಿನ ಕಲೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಮಲೆನಾಡು ಉತ್ಸವ ವರ್ಷದಿಂದ ವರ್ಷಕ್ಕೆ ವಿನೂತನ ಚಿಂತನೆಯನ್ನು ಅಳವಡಿಸಿಕೊಳ್ಳುತ್ತಾ ಮೈಲಿಗಲ್ಲು ನಿರ್ಮಿಸುತ್ತಿದೆ. ಈ ಉತ್ಸವವನ್ನು ಪೋತ್ಸಾಹಿಸುವುದು ಕಲಾಭಿಮಾನಿಗಳ ಕರ್ತವ್ಯ ಎಂದರು. ಶ್ಯಾಮಲಾ ರಂಗನಾಥ್ ಸ್ಮರಣಾರ್ಥ ನೀಡಲಾದ ವಿಶೇಷ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಭಾರತೀಯ ಅನಿವಾಸಿ ಸಮಿತಿ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣ ಪರವಾಗಿ ಸೌಮ್ಯಾ ಸ್ವೀಕರಿಸಿದರು. ಉದ್ಯಮಿ ವಿ.ಆರ್ ರಾಜೇಶ್ ಮತ್ತು ಶೈಕ್ಷಣಿಕ ಕ್ಷೇತ್ರದ ಎನ್. ಲೋಕೇಶ್ ಅವರಿಗೆ ಮಲೆನಾಡು ಉತ್ಸವದ ಸಮರ್ಪಣಾ ಗೌರವವನ್ನು ಪ್ರದಾನ ಮಾಡಲಾಯಿತು.
ಉತ್ಸವ ಅಧ್ಯಕ್ಷ ರಂಗ ಕಲಾವಿದ ಬಿ.ಎಲ್. ರವಿಕುಮಾರ್, ಆಯೋಜಕ ರಮೇಶ್ ಬೇಗಾರ್ ಉಪಸ್ಥಿತರಿದ್ದರು. ಡಾ| ಬಿ.ಎನ್.ವಿ. ಸುಬ್ರಹ್ಮಣ್ಯಂ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.
ಭಾವಗೀತೆ: ಕೊಪ್ಪದ ಭಾವಯಾನ ತಂಡದಿಂದ ನಡೆದ ಭಾವತೀರಯಾನ ಮಧುರ ಅನುಭವವನ್ನು ಕೇಳುಗರಿಗೆ ನೀಡುವಲ್ಲಿ ಯಶಸ್ಸು ಪಡೆಯಿತು. ನಾಗರತ್ನ ನಟರಾಜ್ ಮತ್ತು ಇಮ್ತಿಯಾಜ್ ಸುಲ್ತಾನ್ ಕನ್ನಡದ ಗೀತೆಗೆ ಧ್ವನಿಯಾದರು.
ನಂತರ ಬೆಂಗಳೂರಿನ ಕ್ರಿಯೇಟೀವ್ ಥಿಯೇಟರ್ ತಂಡದವರು ಹೆಸರಾಂತ ಮಲೆಯಾಳಿ ಬರಹಗಾರ ವೈಕಂ ಬಷೀರ್ ಇವರ ಸಣ್ಣ ಕಥೆಯನ್ನು ಆಧರಿಸಿದ ಮೂಗು ಮಸಾಲ ಎಂಬ ವಿಡಂಬನಾತ್ಮಕ ನಾಟಕ ಪ್ರಸ್ತುತ ಪಡಿಸಿದರು.