ಯಾದಗಿರಿ: ಜಿಲ್ಲಾಧಿಕಾರಿ ಹುದ್ದೆಗಿಂತ ಪೌರಕಾರ್ಮಿಕರ ಹುದ್ದೆ ಹೆಚ್ಚಿನ ಜವಾಬ್ದಾರಿ ಹೊಂದಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ ಜೆ. ಹೇಳಿದರು. ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಯಾದಗಿರಿ ಆಶ್ರಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರುವ ಸಂಬಂಧ ಇರುವ ಕಾನೂನುಗಳು ಹಾಗೂ ಸರಕಾರದ ವಿವಿಧ ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಮಲ ಹೊರುವ ಪದ್ಧತಿ ಸಮಾಜಕ್ಕೆ ದೊಡ್ಡ ಪಿಡುಗಾಗಿ ಕಾಡುತ್ತಿತ್ತು. ಇದರಿಂದಾಗಿ ತಿಳಿದೊ-ತಿಳಿಯದೋ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿದ್ದವು. ಇದನ್ನು ಸಂಪೂರ್ಣ ನಿಷೇಧಿ ಸಿ 2013ರಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯನ್ನು ಸರಕಾರ ಜಾರಿಗೆ ತರಲಾಗಿದೆ ಎಂದರು.
ಸಮಾಜ ಆರೋಗ್ಯವಂತವಾಗಿರಲು ಪೌರಕಾರ್ಮಿಕರು ಕಾರಣ. ಸ್ವತ್ಛತೆ ಕಾಪಾಡಿಕೊಳ್ಳುವುದು ಕೇವಲ ಪೌರಕಾರ್ಮಿಕರು, ಸ್ಥಳೀಯ ಸಂಸ್ಥೆಗಳು ಅಷ್ಟೇ ಅಲ್ಲದೇ ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯಾಗಿದೆ. ಪೌರ ಕಾರ್ಮಿಕರಿಗೆ ದೊರೆಯಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಲಹೆ ನೀಡಿದರು.
ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರಿನ ಸಂಶೋಧಕ ಡಾ| ಆರ್.ವಿ. ಚಂದ್ರಶೇಖರ್, ಮ್ಯಾನುವೆಲ್ ಸ್ಕ್ಯಾವೆಂಜರ್ ಆಕ್ಟ್ 2013ರ ರಾಜ್ಯ ಮೇಲುಸ್ತುವಾರಿ ಸಮಿತಿ ಸದಸ್ಯರಾದ ರಾಮಚಂದ್ರ ಹಾಗೂ ಕೆ.ಬಿ.ಓಬಳೇಶ್ ಅವರು ಗೋಷ್ಠಿಯಲ್ಲಿ ಭಾಗವಹಿಸಿ ನೆರೆದಿದ್ದ ಪೌರಕಾರ್ಮಿಕರಿಗೆ ಅಗತ್ಯ ಕಾನೂನು ಮತ್ತು ವಿವಿಧ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಶಾಮಸನ್ ಮಾಳಿಕೇರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಜೀಮ್ ಅಹ್ಮದ್, ಮರೆಪ್ಪ ಚಟ್ಟಳಕರ್, ನಗರಾಭಿವೃದ್ಧಿ ಪ್ರಾ ಧಿಕಾರದ ಯೋಜನಾ ನಿರ್ದೇಶಕ ಎಸ್.ಪಿ.ನಂದಗಿರಿ, ಪೊಲೀಸ್ ಇಲಾಖೆ ಸಿಪಿಐ ಮೌನೇಶ್ ಪಾಟೀಲ ವೇದಿಕೆಯಲ್ಲಿದ್ದರು.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸಲಾಗುತ್ತಿಲ್ಲ, ಇಎಸ್‌ಐ
ಹಾಗೂ ಪಿ.ಎಫ್ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಮ್ಯಾನುವೆಲ್ ಸ್ಕ್ಯಾವೆಂಜರ್ ಆಕ್ಟ್ 2013ರ ರಾಜ್ಯ ಮೇಲುಸ್ತುವಾರಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳದಲ್ಲಿಯೇ ಸಂಬಂಧ ಪಟ್ಟ ಅಧಿಕಾರಿಗಳನ್ನು ವಿಚಾರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆದರು.
ಪೌರ ಕಾರ್ಮಿಕರಿಗೆ ಸಂಬಳ ಪಾವತಿ ಯಾವ ವಿಧಾನದಲ್ಲಿ ಪಾವತಿ ಮಾಡಲಾಗುತ್ತಿದೆ. ಎಷ್ಟು ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಸಿ, ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.