Advertisement

ಜಾನಪದ ಕಲೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

09:06 PM Nov 02, 2019 | Lakshmi GovindaRaju |

ಹಾಸನ: ಪುರಾತನ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಯವ ಜನರು ಚಿಂತಿಸಬೇಕಿದೆ ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್‌.ಡಿ. ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ಸರ್ಕಾರಿ ಪಶು ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಶನಿವಾರದಿಂದ ಆರಂಭವಾದ ಮೂರು ದಿನಗಳ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ ಕಾಲೇಜು ಯುವಜನೋತ್ಸವ – “ಗೋಕುಲೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಭಾ ಪ್ರದರ್ಶನಕ್ಕೆ ಅವಕಾಶ: ಪಠ್ಯ ವಿಷಯಗಳ ಕಲಿಕೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಸಾಂಸ್ಕೃತಿಕ ಪ್ರತಿಭೆ ಪ್ರದರ್ಶಿಸಲು ಹಾಗೂ ಮನರಂಜನೆಯ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿಂಬಿಸಲು ಉತ್ತಮ ವೇದಿಕೆಯನ್ನು ವಿಶ್ವವಿದ್ಯಾನಿಲಯವು ಕಲ್ಪಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ 8 ಪಶುವೈದ್ಯಕೀಯ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿ ಪ್ರತಿಭೆಯನ್ನು ಪ್ರದರ್ಶಿಸುವುದರಿಂದ ಹಲವು ಸಾಂಸ್ಕೃತಿಕ ಕಲೆಗಳ ಸಮಾಗಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾಸನ ಪಶುವೈದ್ಯಕೀಯ ಕಾಲೇಜಿನ ಡೀನ್‌ ಡಾ. ಎಂ.ಸಿ. ಶಿವಕುಮಾರ್‌ ಮಾತನಾಡಿ, ಯುವಜನೋತ್ಸವ ಕಾರ್ಯಕ್ರಮವನ್ನು ಸಾಹಿತ್ಯ, ಸಾಂಸ್ಕೃತಿಕ ಕಲೆಗಳ ತವರೂರಾದ ಹಾಸನ ಜಿಲ್ಲೆಯಲ್ಲಿ ಆಯೋಜಿಸಲು ಅವಕಾಶ ನೀಡಿರುವುದು ಹೆಮ್ಮೆಯ ವಿಷಯ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.

ವಿಶ್ವ ವಿದ್ಯಾನಿಲಯದ ಕುಲಸಚಿವ ಕೆ.ಸಿ ವೀರಣ್ಣ, ಡೀನ್‌ ದಿಲೀಪ್‌ ಕುಮಾರ್‌, ಬೆಂಗಳೂರು ಪಶುವೈದ್ಯಕೀಯ ಕಾಲೇಜು ಡೀನ್‌ ಎಂ.ಎಸ್‌ ನಾರಾಯಣ್‌, ಯುವಜನೋತ್ಸವದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಹಾಗೂ ಸಂಘಟನಾ ಕಾರ್ಯದರ್ಶಿ‌ ಡಾ. ಯಶವಂತ್‌ ಕುಮಾರ್‌ ಅವರು ಉಪಸ್ಥಿತರಿದ್ದರು.

Advertisement

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ: ಹಿರಿಯ ಸಾಹಿತಿ ಹಾಗೂ ಜಾನಪದ ತಜ್ಞ ಗೊ.ರು. ಚನ್ನಬಸಪ್ಪ ಮಾತನಾಡಿ, ನಮ್ಮ ಸಂವಿಧಾನವು ಸಭ್ಯ ನಾಗರಿಕರನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ಯುವಜನರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಒಳಿತಿಗಾಗಿ ಚಿಂತಿಸಿ, ಶ್ರಮಿಸಬೇಕು ಎಂದರು. ಯುವಜನರು ದೇಶದ ಹಾಗೂ ಜನ ಜೀವನದ ನಾಡಿಗಳಾಗಬೇಕು.

ಗ್ರಾಮೀಣ ಪ್ರದೇಶದ ಜನರು ಪ್ರಾಣಿಗಳೊಡನೆ ಅವಿನಾಭಾವ ಸಂಬಂಧ ಹೊಂದಿದ್ದು, ಅವುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. ಯುವ ಪೀಳಿಗೆ ದೇಶದ ಭವಿಷ್ಯದ ಬೆಳಕಾಗಿದ್ದು ಅವರು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು, ಗ್ರಾಮೀಣ ಪ್ರದೇಶದ ಸಂಸ್ಕೃತಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ರೈತ ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕು. ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಗೊ.ರು. ಚನ್ನಬಸಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next