Advertisement

ಅರ್ಹರೆಲ್ಲರೂ ಲಸಿಕೆ ಪಡೆಯಿರಿ, ಕೋವಿಡ್ ನಿಗ್ರಹಕ್ಕೆ ನಿಯಮ ಪಾಲಿಸಿ: ಎಂ.ಬಿ.ಪಾಟೀಲ್

03:34 PM May 01, 2021 | keerthan |

ವಿಜಯಪುರ: ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ, ವ್ಯಕ್ತಿಗತ ಅಂತರ ಕಾಯುವುದು, ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಸ್ ಬಳಸುವಂತಹ ಕೋವಿಡ್ ನಿಯಮ ಪಾಲನೆಯಿಂದ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಈ ವಿಷಯದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮಾಜಿ ಸಚಿವರಾದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಮನವಿ ಮಾಡಿದರು.

Advertisement

ಶನಿವಾರ ತಮ್ಮ ತವರು ಕ್ಷೇತ್ರ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕೋವಿಡ್ ಲಸಿಕಾ ಅಭಿಯಾನ ಅಂಗವಾಗಿ ಬಬಲೇಶ್ವರ, ತಿಕೋಟಾ ಸೇರಿದಂತೆ ವಿವಿಧ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಮಮದಾಪುರ ಲಸಿಕಾ ಕೇಂದ್ರದಲ್ಲಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯ ಸೋಂಕು ಅತ್ಯಂತ ಮಾರಕವಾಗಿದ್ದು ರೋಗದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿದರು.

ಇಂದಿನಿಂದ 18 ವರ್ಷದ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿತ್ತು. ಆದರೆ ಲಸಿಕೆ ಅಭಾವದಿಂದಾಗಿ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಅಗತ್ಯ ಪ್ರಮಾಣದ ಲಸಿಕೆ ಲಭ್ಯವಾಗುತ್ತಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ,  ಅಥವಾ ಲಸಿಕಾ ಅಭಿಯಾನ ನಿಗದಿ ಪಡಿಸಿದ ಶಾಲೆಗಳಿಗೆ ಭೇಟಿ ನೀಡಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಮರಣಮೃದಂಗ: ದೆಹಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ, ವೈದ್ಯ ಸೇರಿದಂತೆ 8ಮಂದಿ ಸಾವು

ವಿಶೇಷವಾಗಿ ಯುವಕರು ತಮ್ಮ ಮನೆಯಲ್ಲಿನ, ಕುಟುಂಬ ವರ್ಗದವರ, ನಿಮ್ಮ ಓಣಿಯ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯುವಂತೆ ಗಮನಹರಿಸಿ,‌ ಲಸಿಕೆ ಪಡೆದವರಿಗೆ ಲಸಿಕೆ ಕೊಡಿಸಲು ಮುಂದಾಗಬೇಕು. ಇದು ನಿಮ್ಮ ಸಾಮಾಜಿಕ ಹೊಣೆಗಾರಿಕೆಯೂ ಹೌದು ಎಂದು ಕಿವಿ ಮಾತು ಹೇಳಿದರು.

Advertisement

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಮುಖಂಡರಾದ ಮಲ್ಲಿಕಾರ್ಜುನ ಗಂಗೂರ, ಲಕ್ಷ್ಮಣ ತೇಲಿ, ಅನೀಲ ನಾಯಕ ವೈದ್ಯಾಧಿಕಾರಿ ಡಾ.ಸಮೀರ ಜಂಬಗಿ, ಪಿಡಿಓ ಮಹೇಶ ಕಗ್ಗೊಡ ಉಪಸ್ಥಿತರಿದ್ದರು.

ಲಸಿಕೆ ಪಡೆಯಲು ಬರುವ ಎಲ್ಲರಿಗೂ ಲಘು ಪಾನೀಯ, ಬಿಸ್ಕಟ್‍ ಒದಗಿಸಲು ವ್ಯವಸ್ಥೆ ಮಾಡಿ. ಇದಕ್ಕೆ ತಗುಲುವ ವೆಚ್ಚವನ್ನು ನಾನೇ ಸ್ವಂತ ಖರ್ಚಿನಲ್ಲಿ ಭರಿಸಲಿದ್ದು, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ವೈದ್ಯರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next