ಚಿಕ್ಕೋಡಿ: ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ಗೌರವಿಸುವ ಮೂಲಕ ತಮ್ಮ ತಮ್ಮ ಕರ್ತವ್ಯ ಅರಿತು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು.
ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತ ಇಂದು ಕೃಷಿ, ವೈದ್ಯಕೀಯ, ಶೈಕ್ಷಣಿಕ, ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಕೃಷಿ, ನೀರಾವರಿ, ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಜಗತ್ತಿನಲ್ಲಿ ದೊಡ್ಡ ಗಣತಂತ್ರ ವ್ಯವಸ್ಥೆ ಹೊಂದಿರುವ ಭಾರತವು ವಿವಿಧತೆಯಲ್ಲಿ ಏಕತೆ ಕಂಡಿದೆ. ಭಾರತ ರತ್ನ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿ ಪ್ರತಿಯೊಬ್ಬ ಪ್ರಜೆಗೆ ವಿವಿಧ ಹಕ್ಕು ನೀಡಿದ್ದಾರೆ ಎಂದರು.
ವಿಧಾನಸಭೆ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗಡಿ ಭಾಗದಲ್ಲಿ ಅಭಿವೃದ್ಧಿ ಸದಾ ಪ್ರಯತ್ನ ಮಾಡಲಾಗುತ್ತದೆ ಎಂದರು. ಈ ವೇಳೆ ಪೊಲೀಸ್, ಎನ್‌ಸಿಸಿ, ಭಾರತ ಸೇವಾದಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ಹಾಗೂ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ತಾಪಂ ಅಧ್ಯಕ್ಷ ಉರ್ಮಿಳಾ ಪಾಟೀಲ, ಉಪಾಧ್ಯಕ್ಷ ಮಹಾದೇವಿ ನಾಯಿಕ, ದ್ರಾಕ್ಷಿ ರಸ ಮಂಡಳಿ ಮಾಜಿ ಅಧ್ಯಕ್ಷ ರವಿಂದ್ರ ಮಿರ್ಜೆ, ಡಿಡಿಪಿಐ ಎಂ.ಜಿ. ದಾಸರ, ಎಎಸ್‌ಪಿ ಮಿಥುನಕುಮಾರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಎಲ್. ಸವದಿ, ನರೇಂದ್ರ ನೇರ್ಲೆಕರ, ಜಿಪಂ ಸದಸ್ಯೆ ಲಕ್ಷ್ಮೀ ಕುರುಬರ, ಮಹೇಶ ಭಾತೆ, ಸಾಬಿರ ಜಮಾದಾರ, ಗುಲಾಬ ಬಾಗವಾನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ತಹಶೀಲ್ದಾರ್ ಡಾ| ಸಂತೋಷಕುಮಾರ ಬಿರಾದಾರ ಸ್ವಾಗತಿಸಿದರು. ಎನ್.ವಿ. ಶಿರಗಾಂವಕರ ನಿರೂಪಿಸಿದರು.