Advertisement

ನಿರ್ಮಾಪಕರ ಉಳಿವಿಗೆ ಎಲ್ಲರೂ ಸಹಕರಿಸಬೇಕು

10:13 AM Apr 16, 2020 | Suhan S |

ಪರಸ್ಪರ ಸಹಕಾರದಿಂದ ಚಿತ್ರರಂಗದ ಏಳಿಗೆ ಸಾಧ್ಯ … – ಹೀಗೆ ಹೇಳಿದ್ದು ಬೇರಾರೂ ಅಲ್ಲ, ಕನ್ನಡ ಚಿತ್ರರಂಗದ ಬಿಝಿ ನಟ, ಅಭಿಮಾನಿಗಳ ಪಾಲಿನ ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌. ಅವರು ಹೀಗೆ ಹೇಳಲು ಕಾರಣ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಎದುರಾಗಬಹುದಾದ ಸಮಸ್ಯೆಗಳು. ಹೌದು,  ಕೋವಿಡ್ 19 ಲಾಕ್‌ ಡೌನ್‌ನಿಂದಾಗಿ ಚಿತ್ರರಂಗಕ್ಕೂ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ಪರಿಸ್ಥಿತಿ ಸರಿ ಹೋಗಲು ಸಾಕಷ್ಟು ಸಮಯ ಬೇಕಾಗಬಹುದು. ಇಂತಹ ಸನ್ನಿವೇಶದಲ್ಲಿ ಪರಸ್ಪರ ಸಹಕಾರ ಅಗತ್ಯ ಎನ್ನುವುದು ಶಿವರಾಜ್‌ ಕುಮಾರ್‌ ಮಾತು. ಈ ಬಗ್ಗೆ ಮಾತನಾಡುವ ಶಿವಣ್ಣ, ಚಿತ್ರರಂಗದ ಪರಿಸ್ಥಿತಿ ಸುಧಾರಿಸಲು ಎಲ್ಲರ ಸಹಕಾರ ಮುಖ್ಯ. ಕಲಾವಿದರು ಹೆಚ್ಚು ಬೆಂಬಲ ನೀಡಬೇಕು. ಜೊತೆಗೆ ಚಿತ್ರಮಂದಿರದ ಮಾಲೀಕರು, ವಿತರಕರು ಹೀಗೆ ಎಲ್ಲರ ಸಹಕಾರದಿಂದ ನಿರ್ಮಾಪಕ ಉಳಿಯಲು ಸಾಧ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೆಚ್ಚಿನ ಸಹಕಾರದಅಗತ್ಯವಿದೆ. ಈಗಾಗಲೇ ಬಿಡುಗಡೆಯಾಗಿರುವ, ಬಿಡುಗಡೆಯಾಗಲಿರುವ ಚಿತ್ರಗಳಿಗೆ ಸಹಕಾರ ನೀಡುವ ಮೂಲಕ ಎಲ್ಲರೂ ನಿರ್ಮಾಪಕರ ನೆರವಿಗೆ ಧಾವಿಸಬೇಕಾಗಿದೆ. ಕಲಾವಿದರು ಆರಂಭದಿಂದಲೂ ಚಿತ್ರರಂಗಕ್ಕೆ ಸಹಕಾರ ನೀಡುತ್ತಲೇ ಬಂದಿದ್ದಾರೆ ಎನ್ನುವುದು ಶಿವರಾಜ ಕುಮಾರ್‌ ಮಾತು.

Advertisement

ಹೆಚ್ಚಾದ ವರ್ಕೌಟ್: ಶಿವರಾಜಕುಮಾರ್‌ ಅವರನ್ನು ನೋಡಿದ ಬಹುತೇಕರು ಕೇಳುವ ಪ್ರಶ್ನೆಎಂದರೆ ನಿಮ್ಮ ನೀವು ಇಷ್ಟೊಂದು ಯಂಗ್‌ ಅಂಡ್‌ ಎನರ್ಜಿಟಿಕ್‌ ಆಗಿರೋದು ಹೇಗೆ ಎಂದು. ಈ ಲಾಕ್‌ಡೌನ್‌ನಲ್ಲಿ ಶಿವರಾಜ್‌ ಕುಮಾರ್‌ ಮತ್ತಷ್ಟು ಫಿಟ್‌ ಆಗಲಿದ್ದಾರೆ. ಅದಕ್ಕೆ ಕಾರಣ ಹೆಚ್ಚಾದ ಅವರ ವರ್ಕೌಟ್ ಸಮಯ. ಹೌದು, ಲಾಕ್‌ಡೌನ್‌ನಲ್ಲಿ ಸಮಯ ಕಳೆಯಲು ಶಿವಣ್ಣ ಜಿಮ್‌ ಅವಧಿಯನ್ನು ಹೆಚ್ಚು ಮಾಡಿದ್ದಾರೆ. ಬೆಳಗ್ಗೆ ಎರಡೂವರೆ ಗಂಟೆ ಹಾಗೂ ಸಂಜೆ ಒಂದೂವರೆ ಗಂಟೆ ಜಿಮ್‌ ಮಾಡುತ್ತಿದ್ದಾರೆ. ಈ ಮೂಲಕ ಮತ್ತಷ್ಟು ಫಿಟ್‌ ಆಗುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಶಿವರಾಜ್‌ ಕುಮಾರ್‌, ಈಗ ವಕೌìಟ್‌ಗೆ ಹೆಚ್ಚು ಸಮಯ ಕೊಡುತ್ತಿದ್ದೇನೆ. ಬೆಳಗ್ಗೆ ಹಾಗೂ ಸಂಜೆ ಹೊತ್ತು ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತೇನೆ. ಬೇರೆ ಸಮಯದಲ್ಲಾದರೆ ಶೂಟಿಂಗ್‌, ಓಡಾಟವೆಂದು ಬಿಝಿಯಾಗಿರುತ್ತೇವೆ. ಆದರೆ ಈಗ ಆ ತರಹದ ಯಾವುದೇ ಬಿಝಿ ಇಲ್ಲ. ಹಾಗಾಗಿ ಹೆಚ್ಚಿನ ಸಮಯ ಸಿಗುತ್ತಿದೆ ಎನ್ನುವುದು ಶಿವಣ್ಣ ಮಾತು.

ಟೈಂಪಾಸ್‌ಗೆ ವೆಬ್‌ ಸೀರಿಸ್‌ :  ಕನ್ನಡ ಚಿತ್ರರಂಗದಲ್ಲಿ ಸದಾ ಬಿಝಿಯಾಗಿರುವ ಕೆಲವೇ ಕೆಲವು ನಟರಲ್ಲಿ ಶಿವರಾಜ್‌ ಕುಮಾರ್‌ ಕೂಡಾ ಒಬ್ಬರು. ಒಂದಲ್ಲ, ಒಂದು ಸಿನಿಮಾದಚಿತ್ರೀಕರಣದಲ್ಲಿ ಬಿಝಿಯಾಗಿರುವ ಶಿವರಾಜ್‌ ಕುಮಾರ್‌, ಈ ಲಾಕ್‌ ಡೌನ್‌ನಲ್ಲಿ ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದಕ್ಕೆ ಉತ್ತರ ವೆಬ್‌ ಸೀರಿಸ್‌. ಹೌದು, ಶಿವಣ್ಣ ವೆಬ್‌ ಸೀರಿಸ್‌ ನೋಡಿಕೊಂಡು ಸಮಯ ಕಳೆಯುತ್ತಿದ್ದಾರಂತೆ. ಡಿಜಿಟಲ್‌ ಪೊರ್ಟಲ್‌ವೊಂದರ ವೆಬ್‌ ಸೀರಿಸ್‌ ಅನ್ನು ಶಿವಣ್ಣ ನೋಡುತ್ತಾ ಟೈಂ ಪಾಸ್‌ ಮಾಡುತ್ತಿದ್ದಾರಂತೆ.

500 ಜನರಿಗೆ ಊಟದ ವ್ಯವಸ್ಥೆ :  ಸದ್ಯ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಹಸಿದವರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಶಿವರಾಜ್‌ ಕುಮಾರ್‌ ಕೂಡಾ ಇದರಿಂದ ಹೊರತಲ್ಲ. ದಿನಂಪ್ರತಿ 500 ಜನರಿಗೆಊಟದ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡುವ ಮೂಲಕ ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next