ನೆಲಮಂಗಲ: ಪ್ರಕೃತಿ ಸೌಂದರ್ಯದ ಜೊತೆ ಪ್ರಾಣಿಸಂಕುಲ ಬದುಕಲು ಜನಶಕ್ತಿ ಅನಿವಾರ್ಯ, ಜಲ ವಿಲ್ಲದೆ ಮಾನವರಿಲ್ಲ ಎಂಬುದನ್ನು ಮನಗಾಣಬೇಕು ಎಂದು ಶ್ರೀನಿವಾಸಪುರ ಗ್ರಾಪಂ ಅಧ್ಯಕ್ಷ ಎಂ.ಇ.ಗೋವಿಂದರಾಜು ಸಲಹೆ ನೀಡಿದರು. ತಾಲೂಕಿನ ಶ್ರೀನಿವಾಸಪುರ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕುಸಿಯುತ್ತಿರುವ ಅಂತರ್ಜಲ: ಮಾನವನ ದುರಾಸೆಯಿಂದ ಅಂತರ್ಜಲ ಮಟ್ಟ ಪಾತಾಳ ಸೇರುತ್ತಿದೆ. ಕೆಲವು ಕಡೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಗಾಲೇ ನೀರಿಗೆ ಹಣ ನೀಡಿ ಖರೀದಿಸುವ ದುಸ್ಥಿತಿ ಬಂದಿದೆ. ನಮ್ಮ ಮಕ್ಕಳ ಕಾಲದಲ್ಲಿ ಚಿನ್ನ ಸಿಕ್ಕರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣ ವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಲಾಮೃತ ಯೋಜನೆಯಂತೆ ಸಾಗಬೇಕು: ಆದ್ದರಿಂದ ನೀರಿನ ಸದ್ಬಳಕ್ಕೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ, ಮನೆಯಲ್ಲಿ ಬಳಸುವ ನೀರು ಮಿತ ವಾಗಿರಬೇಕು, ಮಳೆ ನೀರುಕೊಯ್ಲು ವಿಧಾನದ ಮೂಲಕ ಮಳೆ ನೀರಿನ ಸಂಗ್ರಹಣೆಯಾಗಲಿ, ಮರಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಪರಿಸರವನ್ನು ಉತ್ತಮವಾಗಿಡಬೇಕು, ಅದಲ್ಲದೆ ನೀಲಗಿರಿಯನ್ನು ನಾಶಮಾಡಿದರೆ ಮಾತ್ರ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ. ಜಲ ಶಕ್ತಿಯಾಗಬೇಕಾದರೆ ನಾವೆಲ್ಲರೂ ಜಲಾಮೃತ ಯೋಜನೆಯಂತೆ ಸಾಗಬೇಕು ಎಂದರು.
ಜಲ ಸಂರಕ್ಷಣೆ ಕಡೆ ನಾವೆಲ್ಲರೂ ಗಮನಹರಿಸಿ: ಗ್ರಾಮ ಪಂಚಾಯ್ತಿ ಸದಸ್ಯ ಯಲಚಗೆರೆ ಹನುಮಂತರಾಜು ಮಾತನಾಡಿ, ನೀರಿನ ಮಿತ ಬಳಕೆಯಾದರೆ ಮಾತ್ರ ಮುಂದಿನ ಪೀಳಿಗೆಗೆ ಕುಡಿಯಲು ನೀರು ಸಿಗುತ್ತದೆ. ಅದನ್ನು ಬಿಟ್ಟು ಅಂತರ್ಜಲ ನಾಶ ಮಾಡಿದರೆ ನೀರಿನ ಬಗ್ಗೆ ಇತಿಹಾಸದ ಪುಟದಲ್ಲಿ ಕಾಣಬೇಕಾಗುತ್ತದೆ. ಗ್ರಾಮದ ಜನರು ಮಳೆಯ ನೀರು ಹರಿದು ಹೋಗುವುದನ್ನು ತಡೆದು ಇಂಗುಗುಂಡಿ ಮೂಲಕ ಸಂಗ್ರಸಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಮಳೆಯ ನೀರನ್ನು ಸಂಗ್ರಹಿಸುವುದರಿಂದ ನೀರಿನ ಸಮಸ್ಯೆ ಕಡಿಮೆಯಾಗಲಿದೆ, ಜಲ ಸಂರಕ್ಷಣೆ ಕಡೆ ನಾವೆಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ಚೆಕ್‌ಡ್ಯಾಂ ನಿರ್ಮಾಣ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಚೆಕ್‌ಡ್ಯಾಂಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಅಂತರ್ಜಲ ಚೇತರಿಸಿಕೊಂಡಿದೆ. ಕೆಲವು ಗ್ರಾಮದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಚೆಕ್‌ಡ್ಯಾಂಗಳ ನಿರ್ಮಾಣದ ಪ್ರತಿಫಲ, ಆದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಚೆಕ್‌ಡ್ಯಾಂ ನಿರ್ಮಾಣ ಮಾಡುತ್ತೇವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವಾಕರಯ್ಯ ತಿಳಿಸಿದರು.
ಗ್ರಾಮ ಸಭೆಯ ನೋಡಲ್ ಅಧಿಕಾರಿ ಶ್ರೀಕಂಠಯ್ಯ, ಗ್ರಾಪಂ ಉಪಾಧ್ಯಕ್ಷೆ ಉಮಾ, ಸದಸ್ಯರಾದ ಹನುಮಂತರಾಯಪ್ಪ, ಶಿವಮ್ಮ, ಸುನಂದಮ್ಮ, ಸಿದ್ದಗಂಗಮ್ಮ, ಮಧುಕರ್, ರೇಣುಕಮ್ಮ, ವಲಯ ಅರಣ್ಯ ಇಲಾಖೆಯ ಚಂದ್ರಶೇಖರ್, ಕಾರ್ಯದರ್ಶಿ ಎನ್. ರಂಗಶಾಮಯ್ಯ, ಬಿಲ್‌ಕಲೆಕ್ಟರ್ ಕೃಷ್ಣಪ್ಪ, ಗ್ರಾಮದ ಮುಖಂಡರು ಹಾಗೂ ಸ್ತ್ರೀ ಶಕ್ತಿ ಸಂಘದ ಮಳೆಯರು ಉಪಸ್ಥಿತರಿದ್ದರು.