ಸಂತೆಮರಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡುವುದು ಕರ್ತವ್ಯವಾಗಿದೆ. ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಎಚ್. ಮಂಜುನಾಥ್ ಹೇಳಿದರು.
ಯಳಂದೂರು ತಾಲೂಕಿನ ಯರಿಯೂರು ಕೆರೆ ಬಳಿಯ ಶನಿದೇವರ ದೇವಸ್ಥಾನದ ಬಳಿಯಲ್ಲಿ ಮೀನುಗಾರಿಕಾ ಇಲಾಖೆ, ಸ್ವೀಪ್ ಸಮಿತಿ ವತಿಯಿಂದ ಮೀನುಗಾರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಕ್ಕು ಚಲಾಯಿಸುವುದಕ್ಕೆ ಆಲಸ್ಯಬೇಡ: ದೇಶದ ಅಖಂಡತೆ ಹಾಗೂ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ನಾವು ಆರಿಸಿ ಕಳುಹಿಸುವ ಜನಪ್ರತಿನಿಧಿಗಳು ನಮ್ಮ ಸೇವೆ ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಇಂತಹ ಮಹತ್ವ ನಮ್ಮ ವ್ಯವಸ್ಥೆಯಲ್ಲಿದೆ. ಆದರೆ ಈ ಬಗ್ಗೆ ನಮ್ಮಲ್ಲಿ ಜಾಗೃತಿ ಕಡಿಮೆ ಇದೆ. ಹಾಗಾಗಿ ನಮ್ಮ ಹಕ್ಕನ್ನು ಚಲಾಯಿಸುವಲ್ಲಿ ಆಲಸ್ಯ ಇನ್ನೂ ಹೆಚ್ಚಾಗಿದೆ ಎಂದರು.
ಕಡ್ಡಾಯವಾಗಿ ಮತದಾನ ಮಾಡಿ: ಶೇ. 100ರಷ್ಟು ಮತದಾನ ನಡೆಯದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿ ಸಬೇಕು. ಆ ದಿನ ನಮ್ಮ ಕೆಲಸಕ್ಕೆ ಕೆಲವು ಸಮಯ ವಿರಾಮ ಹೇಳಿ ಮತದಾನ ಮಾಡುವುದೂ ಕೂಡ ನನ್ನ ಕರ್ತವ್ಯವೆಂದು ಅರಿತು. ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿ ಹೇಳಿದರು.
5 ಮೀನುಗಾರರ ಸಂಘ: ಇದಕ್ಕೂ ಮುಂಚೆ ಚುನಾವಣೆಯ ಗೆಲುವಿಗಾಗಿ ಅಭ್ಯರ್ಥಿಗಳು ನೀಡುವ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಇದನ್ನು ದಿಕ್ಕರಿಸುವ ಮನೋಭಾವನೆ ರೂಢಿಸಿಕೊಳ್ಳಬೇಕು. ತಾವೇ ಸ್ವಯಂ ಪ್ರೇರಿತರಾಗಿ ನಮ್ಮ ಕೆಲಸ ಮಾಡಬಲ್ಲ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕು.
ಮೀನುಗಾರಿಕಾ ಇಲಾಖೆ ವತಿಯಿಂದಲೂ ಮತದಾನದ ಬಗ್ಗೆ ಜಿಲ್ಲಾದ್ಯಂತ ಅರಿವು ಮೂಡಿಸುವ ಅನೇಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯಳಂದೂರು ತಾಲೂಕಿನಲ್ಲಿ 5 ಮೀನುಗಾರ ಸಹಕಾರ ಸಂಘಗಳಿದ್ದು 1336 ಸದಸ್ಯರು ಇದ್ದಾರೆ. ಇವರೆಲ್ಲರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಪ್ರತಿಜ್ಞಾ ವಿಧಿ ಬೋಧನೆ: ಮೀನುಗಾರಿಕಾ ಇಲಾಖೆಯ ವತಿಯಿಂದ ನೀಡಲಾಗುವ ಬೋಟ್‌ಗಳ ನಡುವೆ, ಬಲೆಗಳಲ್ಲಿಯೇ ಸ್ವೀಪ್ ಹಾಗೂ ಏಪ್ರಿಲ್ 18 ರಂದು ತಪ್ಪದೆ ಮತ ಚಾಲಾಯಿಸಿ ಎಂದು ಅಕ್ಷರಗಳನ್ನು ಜೋಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರರು ಜಾಗೃತಿ ಜಾಥಾವನ್ನು ನಡೆಸಿದರು.
ಇಲಾಖೆ ಸಹಾಯಕ ನಿರ್ದೇಶಕರಾದ ಶ್ವೇತಾ, ಪ್ರಶಾಂತ್, ವಿವೇಕ್ ನೋಡಲ್ ಅಧಿಕಾರಿ ಸ್ನೇಹಾದರ್ಶನ್, ಕ್ಷೇತ್ರ ಪಾಲಕ ನಟರಾಜು, ನಂಜುಂಡ ಮೀನುಗಾರರ ಸಹಕಾರ ಸಂಘದ ಎಸ್.ಬಸವಶೆಟ್ಟಿ, ಕೆಸ್ತೂರು ಗುರು, ಅಗರ ಲಿಂಗರಾಜು, ಮಹದೇವಸ್ವಾಮಿ, ವೆಂಕಟರಂಗಶೆಟ್ಟಿ ಇತರರು ಇದ್ದರು.