ಮದ್ದೂರು: 18 ವರ್ಷದಿಂದ ತುಂಬಿದ ಪ್ರತಿಯೊಬ್ಬರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸುಭದ್ರ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ತಹಶೀಲ್ದಾರ್ ಟಿ.ಎನ್. ನರಸಿಂಹಮೂರ್ತಿ ತಿಳಿಸಿದರು.
ಮದ್ದೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಚುನಾವಣಾ ಶಾಖೆಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಚಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಪ್ರಕ್ರಿಯೆ ಕಡ್ಡಾಯವಾಗಿದೆ.
ಸ್ವಯಂ ಪ್ರೇರಿತವಾಗಿ ಮತದಾನ ಮಾಡುವ ಮೂಲಕ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮತದಾರರೇ ಮತದಾನ ಪ್ರಕ್ರಿಯೆಯಿಂದ ದೂರವಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು.
ಯುವ ಜನರು ಸಕ್ರೀಯರಾಗಿ: ನಿರ್ಭೀತಿ, ನಿರಾಂತಕವಾಗಿ ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ ಅಗತ್ಯವಾಗಿದ್ದು, ಯುವ ಜನರು ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಭಾರತ ಒಂದು ಬೃಹತ್ ಪ್ರಜಾಪ್ರಭುತ್ವರಾಷ್ಟ್ರವಾಗಿದ್ದು, ದೇಶದಲ್ಲಿ ಅಧಿಕ ಯುವಕ,ಯುವತಿಯರಿಂದ ಯುವ ರಾಷ್ಟ್ರವೆಂದು ಪ್ರಸಿದ್ಧಿ ಪಡೆದುಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಇದನ್ನರಿತು ಪ್ರತಿಯೊಬ್ಬರು ಮತದಾನದ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ ಇತ್ತೀಚಿನ ದಿನ ಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಇದರಿಂದ ಮತದಾನ ಪ್ರಕ್ರಿಯೆ ಸುಲಲಿತವಾಗಿ ನಡೆದು, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋ ಸ್ಕರ ರಚಿತವಾಗಿರುವ ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ಎತ್ತಿಹಿಡಿಯುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವ ದೃಢ ನಿರ್ಧಾರವನ್ನು ಕೈಗೊಳ್ಳಬೇಕು ಎಂದರು.
ಜಾಗೃತಿ ಜಾಥಾ: ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ಮತದಾರರ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾವುಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಿದರಲ್ಲದೆ, ಮತ ದಾನ ಪಟ್ಟಿ ಸೇರ್ಪಡೆಗೊಳಿಸುವಂತೆ ಘೋಷಣೆ ಕೂಗಿದರು.
ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್, ಚುನಾವಣೆ ಶಾಖೆ ಶಿರಸ್ತೇದಾರ್ ರೂಪ, ಸಹಾಯಕ ಅಧಿಕಾರಿ ಪವನ್‌ಕುಮಾರ್, ಮಹಿಳಾ ಕಾಲೇಜು ಪ್ರಾಂಶುಪಾಲ ಕೆ.ಬಿ.ನಾರಾಯಣ್, ದೈಹಿಕ ಶಿಕ್ಷಣಶಿಕ್ಷಕ ಮೋಹನ್‌ಕುಮಾರ್, ಕಂದಾಯ ರಾಜಸ್ವ ನಿರೀಕ್ಷಕ ಹರೀಶ್ ಮತ್ತು ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.