ಗುಂಡ್ಲುಪೇಟೆ: ಸರ್ವ ಸಮುದಾಯದ ಭಕ್ತ ಶ್ರೇಷ್ಠ ಹಾಗೂ ಸಂತ ಶ್ರೇಷ್ಠ ಕನಕದಾಸರ ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕನಕದಾಸರು ಸಮಾಜ ಸುಧಾರಕರಾಗಿದ್ದು, ಅವರ ಜೀವನದ ಪ್ರತಿಘಟ್ಟವೂ ಒಂದೊಂದು ತತ್ವಗಳನ್ನು ಆದರ್ಶಿಸುವ ಅಧ್ಯಾಯವಾಗಿದೆ. ಇಂತಹ ವ್ಯಕ್ತಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದೇ ಎಲ್ಲಾ ಸಮುದಾಯದವರಿಗೂ ಇವರು ಹಾಕಿಕೊಟ್ಟ ಮಾರ್ಗ ಬುನಾದಿಯಾಗಬೇಕು. ಸಮಾನತೆಯ ತಳಹದಿಯಲ್ಲಿನ ಇವರ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ಶ್ರಮ: ಸರ್ಕಾರವು ಸಮಾಜಿಕ ನ್ಯಾಯವನ್ನು ಒದಗಿಸುವ ದೃಷ್ಟಿಯಿಂದ ಈಗಾಗಲೇ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಆರೋಗ್ಯ ಶಿಕ್ಷಣ ಸೇರಿದಂತೆ ಮೂಲಸೌಕರ್ಯವನ್ನು ನೀಡುವಲ್ಲಿ ಎಲ್ಲಾ ವರ್ಗದವರ ಮೇಲೆ ಕಾಳಜಿಯನ್ನು ಇಟ್ಟು ದುಡಿಯುತ್ತಿದೆ ಎಂದು ಹೇಳಿದರು.
ಎಲ್ಲರೂ ಒಂದೇ: ಸಾಹಿತಿ ಕೆಂಪರಾಜು ಮಾತನಾಡಿ, ಕೇವಲ ಸಾಹಿತ್ಯದಿಂದ ಅಲ್ಲದೇ ವಿಶ್ವಕ್ಕೆ ಅದರ್ಶ ನೀಡುವ ಗುಂಪಿನಲ್ಲಿ ಕನಕದಾಸರು ಸೇರುತ್ತಾರೆ. ಅವರೊಬ್ಬ ಮಾನವತಾವಾದಿ ಅವರ ದಾಸ ಸಾಹಿತ್ಯದಲ್ಲಿಯೇ ಹೇಳುವಂತೆ ಎಲ್ಲರೂ ಒಂದೇ. ಎಲ್ಲರೂ ದೇವರನ್ನು ನಂಬಿ ಎಂದು ಜಗತ್ತಿಗೆ ಸಾರಿದರು. ಆ ಮೂಲಕ ಭಕ್ತಿಭಾವವನ್ನು ಜನರಲ್ಲಿ ತುಂಬುವಲ್ಲಿ ಯಶಸ್ಸು ಕೊಂಡರು ಎಂದು ಹೇಳಿ ಸಂತ ಶ್ರೇಷ್ಠ ಕನಕದಾಸರ ವಿಚಾರಧಾರೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದರು.
ದೇಶದಲ್ಲಿ ಹೆಚ್ಚುತ್ತಿದೆ ಜಾತಿಯತೆ: ದೇಶದಲ್ಲಿ ಜಾತಿಯತೆ ಹೆಚ್ಚುತ್ತಿದೆ. ಜಾತಿಗೊಂದು ಸಮಾಜ ನಿರ್ಮಾಣವಾಗುತ್ತಿದೆ. ಜಾತಿಯತೆಯ ಪ್ರಭಾವದಿಂದ ನಮ್ಮ ದೇಶ ಅಭಿವೃದ್ಧಿ ಅಸಾಧ್ಯ. ಇತರೇ ರಾಷ್ಟ್ರಗಳು ಸಾಮಾಜಿಕ ನ್ಯಾಯದಡಿ ಅಭಿವೃದ್ಧಿ ಸಾಧಿಸುತ್ತಿವೆ. ಅಸಮಾನತೆ ವಿರುದ್ಧ ಹೋರಾಡಿದ ದಾರ್ಶನಿಕರ ಪಟ್ಟಿಗೆ ಕನಕದಾಸರು ಸೇರುತ್ತಾರೆ. ಇವರು ದೇಶ ಕಂಡ ಹರಿಭಕ್ತರಲ್ಲಿ ಒಬ್ಬರಾಗಿದ್ದಾರೆ. ದೇಶದಲ್ಲಿ ತಾಂಡವವಾಡುತ್ತಿರುವ ಜಾತಿಯತೆಗೆ ಕನಕದಾಸರ ಕೀರ್ತನೆಗಳೇ ಅಸ್ತ್ರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಸೋಮಹಳ್ಳಿ ಮಧುಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮುನಿರಾಜು, ಮುಖಂಡರಾದ ಪಿ.ಚಂದ್ರಪ್ಪ, ಪಿ.ಬಿ.ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪುರಸಭಾ ಮಾಜಿ ಸದಸ್ಯರಾದ ಹೊಸೂರು ಬಸವರಾಜು, ಜಿ.ಎಲ್.ರಾಜು, ತಹಶೀಲ್ದಾರ್ ನಂಜುಂಡಯ್ಯ ಹಾಜರಿದ್ದರು.