ಕುಷ್ಟಗಿ: ರೈತರು, ಕೂಲಿಕಾರ್ಮಿಕರು ಅಷ್ಟೇ ಅಲ್ಲ ಎಪಿಎಂಸಿಯ ಟ್ರೇಡಿಂಗ್, ದಲ್ಲಾಳಿ ವರ್ತಕರು, ಹಮಾಲರು ಸಹ ಈಗ ಮಳೆ ಜಪದಲ್ಲಿದ್ದಾರೆ.
ಟ್ರಕ್, ಟ್ರ್ಯಾಕ್ಟರ್ ಮಾಲೀಕರು, ವರ್ತಕರು, ಹಮಾಲರು ಸಹ ರೈತರಂತೆ ನಿತ್ಯವೂ ಮಳೆಗಾಗಿ ಮೋಡದತ್ತ ಮುಖ ಮಾಡುವಂತಾಗಿದೆ. ರೈತ ವರ್ಗ ಅಷ್ಟೇ ಅಲ್ಲ ವರ್ತಕರು ಸಹ ಖಾಲಿ ಕುಳಿತು ಮುಂದೇನು ಎನ್ನುವ ಚಿಂತೆ ಅವರನ್ನೂ ಬಿಟ್ಟಿಲ್ಲ.
ಪ್ರಸಕ್ತ ಎಪಿಎಂಸಿ ಮಾರುಕಟ್ಟೆಗೆ ಸದ್ಯ 11,225 ಕ್ವಿಂಟಲ್ ಸಜ್ಜೆ, 797 ಮೆಕ್ಕೆಜೋಳ, 714 ನವಣೆ, 926 ಕಡಲೆ, 1,562 ಅಲಸಂದಿ, 1,149 ಶೇಂಗಾ, 1,919 ತೊಗರಿ, 758 ಹೆಸರು, 438 ಬೇವಿನಹಣ್ಣು, 4,693 ಹುಣಸೆ ಬೀಜ, 25 ಹುಣಸೆಹಣ್ಣು, 425 ಕ್ವಿಂಟಲ್ ಭತ್ತ ಆವಕವಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 11,65,906 ಮಾರುಕಟ್ಟೆ ಶುಲ್ಕ ಜಮೆಯಾಗಿತ್ತು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ 9.92,934 ಜಮೆಯಾಗಿದೆ. 2017-18 ವಾರ್ಷಿಕ ಮಾರುಕಟ್ಟೆ ಶುಲ್ಕದ 2.27 ಕೋಟಿ ರೂ. ಗುರಿಯಲ್ಲಿ 2,15,75,073 ರೂ. ಆಗಿತ್ತು. ಪ್ರಸಕ್ತ 2018-19ನೇ ಸಾಲಿನ 2.50ಕೋಟಿ ಗುರಿಯಲ್ಲಿ 2,01,87, 372 ರೂ. ಆಗಿದ್ದು, ಶೇ. 80.74 ಮಾರುಕಟ್ಟೆ ಶುಲ್ಕ ಜಮೆಯಾಗಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಶೇಂಗಾ 2,500 ಕ್ವಿಂಟಲ್ ಆವಕವಾಗಿತ್ತು, ಪ್ರಸಕ್ತ ವರ್ಷದ ಈ ತಿಂಗಳಿನಲ್ಲಿ 1,149 ಕ್ವಿಂಟಲ್ ಆವಕವಾಗಿದೆ. ಶೇಂಗಾ ಇಳುವರಿಯಲ್ಲಿ ಶೇ. ಅರ್ಧದಷ್ಟು ಇಳುವರಿ ಕಡಿಮೆಯಾಗಿದೆ. ಸದ್ಯ ಬೇಸಿಗೆ ಶೇಂಗಾ ಉತ್ಪನ್ನಕ್ಕೆ 5,809 ರೂ.ಗಳಿಂದ 6 ಸಾವಿರ ರೂ. ದರ ಇದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಈ ಉತ್ಪನ್ನಕ್ಕೆ 4,250 ರೂ. ಇತ್ತು. ಸದ್ಯ ಬೇಸಿಗೆ ಬರ ಹಿನ್ನೆಲೆಯಲ್ಲಿ ಹಾಗೂ ಅಂತರ್ಜಲ ತೀವ್ರ ಕುಸಿತದ ಪರಿಣಾಮ ಶೇಂಗಾ ಬೆಳೆ ಇಳುವರಿ ಪ್ರಮಾಣ ಶೇ.30 ಪ್ರಮಾಣ ತಗ್ಗಿಸಿದೆ. ಪ್ರತಿ ವರ್ಷದ ಶೇಂಗಾ ಸೀಜನ್‌ದಂತೆ ಈ ವರ್ಷ ಇಲ್ಲ. ಈ ವರ್ಷದಲ್ಲಿ ಅಂತರ್ಜಲ ಕ್ಷೀಣಿಸಿದ್ದರಿಂದ ರೈತರು ಶೇಂಗಾ ಬೆಳೆದಿಲ್ಲ. ಎಲ್ಲೋ ಅಂತರ್ಜಲ ಸಂಪನ್ಮೂಲ ಇದ್ದವರು ಶೇಂಗಾ ಬೆಳೆದಿದ್ದು, ಈ ವರ್ಷದಷ್ಟು ಕನಿಷ್ಠ ಪರಿಸ್ಥಿತಿ ಇನ್ಯಾವ ವರ್ಷಗಳಲ್ಲಿ ಕಂಡಿಲ್ಲ. ನಾವೂ ಸಹ ಮಳೆ ನಿರೀಕ್ಷೆಯಲ್ಲಿದ್ದು, ಮಳೆಯಾದರೆ ಮಾತ್ರ ವಹಿವಾಟು ಶುರುವಾಗಲಿದೆ ಎನ್ನುವ ಅಭಿಪ್ರಾಯ ಬಿ.ಜಿ. ಶಿವಶೆಟ್ಟರ್ ಟ್ರೇಡರ್ ಮಾಲೀಕ ಗೂಳಪ್ಪ ಶಿವಶೆಟ್ಟರ್ ಅವರ ಅಭಿಪ್ರಾಯ.
Advertisement
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಗಂಜ್ ಯಾರ್ಡ್‌ನಲ್ಲಿ ಈ ಸೀಜನ್‌ದಲ್ಲಿ ವ್ಯಾಪಾರ ವಹಿವಾಟು ಅಷ್ಟಕಷ್ಟೆ ಇರುತ್ತದೆ. ಈ ವರ್ಷ ತೀರಾ ಕನಿಷ್ಠವಾಗಿದೆ. ಸದಾ ವ್ಯಾಪಾರ- ವಹಿವಾಟಿನಿಂದ ಗಿಜಗುಡುವ ಎಪಿಎಂಸಿ ಯಾರ್ಡ್ ಭಣಗುಡುತ್ತಿದೆ. ರೈತರ್ಯಾರು ಈ ಗಂಜ್ ಯಾರ್ಡ್ ಕಡೆ ಮುಖ ಮಾಡಿಲ್ಲ. ವರ್ತಕರಿಗೆ ಕೆಲಸವೇ ಇಲ್ಲದಂತಾಗಿದ್ದು, ಹಮಾಲರು ನಿತ್ಯವೂ ಕೆಲಸವಿಲ್ಲದೇ ಚಡಪಡಿಸುವಂತಾಗಿದೆ.
Related Articles
ಎಪಿಎಂಸಿ ಮಾರುಕಟ್ಟೆಯಲ್ಲಿ ಬರದಿಂದಾಗಿ ಕೃಷಿ ಉತ್ಪನ್ನ ಕಡಿಮೆಯಾಗಿದ್ದು, ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಶೇಂಗಾ ಮಾರುಕಟ್ಟೆಗೆ ಹೆಸರಾದ ಕುಷ್ಟಗಿ ಎಪಿಎಂಸಿಯಲ್ಲಿ ಈ ವರ್ಷದಲ್ಲಿ ಅಷ್ಟು ಶೇಂಗಾ ಆವಕವಾಗಿಲ್ಲ. ಪ್ರಸಕ್ತ ವರ್ಷದಲ್ಲಿ ಇಳುವರಿ ಕಡಿಮೆ ಇದ್ದು, ದರ ಉತ್ತಮವಾಗಿದೆ.
ಜಿ.ಎಸ್.ಗುಡಿ ಸಹಾಯಕ ಕಾರ್ಯದರ್ಶಿ, ಎಪಿಎಂಸಿ ಕುಷ್ಟಗಿ
ಕಳೆದ ಎರಡು ವಾರದಿಂದ ಮಾರುಕಟ್ಟೆ ಯಲ್ಲಿ ವ್ಯಾಪಾರ- ವಹಿವಾಟು ಇಲ್ಲದೇ ಸ್ತಬ್ಧಗೊಂಡಿದೆ.ಯಲಬುರ್ಗಾದಿಂದ ಶೇ.10 ಪಂಪ್‌ಸೆಟ್ ಆಧಾರಿತ ನೀರಾವರಿ ಶೇಂಗಾ ಬಂದಿದ್ದು, ಕುಷ್ಟಗಿ ತಾಲೂಕಿನದ್ದು ಏನೂ ಇಲ್ಲ.
ಮಹಾಂತಯ್ಯ ಅರಳಲಿಮಠ ಅಧ್ಯಕ್ಷರು, ಶ್ರೀ ಶರಣಬಸವೇಶ್ವರ ವರ್ತಕರ ಸಂಘ ಎಪಿಎಂಸಿ ಗಂಜ್ ಯಾರ್ಡ್ ಕುಷ್ಟಗಿ
ಮಹಾಂತಯ್ಯ ಅರಳಲಿಮಠ ಅಧ್ಯಕ್ಷರು, ಶ್ರೀ ಶರಣಬಸವೇಶ್ವರ ವರ್ತಕರ ಸಂಘ ಎಪಿಎಂಸಿ ಗಂಜ್ ಯಾರ್ಡ್ ಕುಷ್ಟಗಿ
Advertisement
ಮಂಜುನಾಥ ಮಹಾಲಿಂಗಪುರ