Advertisement

ಆ ಅತಿಥಿ ನೋಡಿ ಎಲ್ಲರೂ ತಬ್ಬಿಬ್ಬು

06:27 PM Jul 08, 2019 | Team Udayavani |

1940ರ ದಶಕ. ಕಂಪ್ಯೂಟರ್‌ ಎಂದರೆ ಒಂದು ದೊಡ್ಡ ಕೊಠಡಿಯ ಗಾತ್ರದ ಯಂತ್ರ ಎಂದು ಎಲ್ಲರೂ ಪರಿಗಣಿಸಿದ್ದ ಕಾಲ. ಅಂಥ ಒಂದು ಕಂಪ್ಯೂಟರ್‌ ಅನ್ನು ಸ್ಥಾಪಿಸಬೇಕಾದರೂ ಹಲವು ಸಾವಿರ ಡಾಲರುಗಳನ್ನು ವ್ಯಯಿಸಬೇಕಿತ್ತು. ಕಾಲೇಜುಗಳು ಆ ಆಧುನಿಕ ತಂತ್ರಜ್ಞಾನವನ್ನು ತಮ್ಮಲ್ಲಿಟ್ಟುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದವು. ಯಾಕೆಂದರೆ ಅದೇ ಹಣದಲ್ಲಿ ಕಾಲೇಜಿನ ಬೇರೆ ದೊಡ್ಡ ಅಗತ್ಯಗಳನ್ನು ಪೂರೈಸಿಕೊಳ್ಳಬಹುದಿತ್ತು.

Advertisement

ಕಂಪ್ಯೂಟರ್‌ ವಿಷಯದಲ್ಲಿ ಬಹಳಷ್ಟು ಕೆಲಸ ಮಾಡಿದ್ದ ಗಣಿತಜ್ಞ ಜಾನ್‌ ಫಾನ್‌ ನೊಯಾನ್‌ಗೆ ಪ್ರಿನ್ಸ್‌ಟನ್‌ನ ಇನ್ಸ್ಟಿಟ್ಯೂಟ್‌ ಫಾರ್‌ ಅಡ್ವಾನ್ಸ್‌ ಸ್ಟಡೀಸ್‌ ಸಂಸ್ಥೆಯೇ ಕಂಪ್ಯೂಟರ್‌ ಇಡಲು ಸೂಕ್ತವಾದ ಸ್ಥಳ ಅನ್ನಿಸಿತು. ಆದರೆ ಬಂಡವಾಳ ಹೂಡುವವರು ಯಾರು? ನೊಯಾ¾ನ್‌ ಅಂಥ ಹಲವು ಸಂಭಾವ್ಯ ವ್ಯಕ್ತಿಗಳನ್ನು ಪಟ್ಟಿ ಮಾಡಿದ. ಕೆಲವರನ್ನು ಸಂಪರ್ಕಿಸಿದ. ವಿಷಯ ವಿವರಿಸಿದ. ಕೊನೆಗೆ ಉದ್ಯಮಿ ಹಾಗೂ ಹೊಸ ಉದ್ಯಮಗಳ ಪ್ರೋತ್ಸಾಹಕ ಜೂಲಿಯಾನ್‌ ಬೆಗಲೊವ್‌, ಅಂಥ ಸಾಹಸಕ್ಕೆ ಸಂಪೂರ್ಣವಾಗಿ ಹಣ ತೊಡಗಿಸುತ್ತೇನೆಂದು ಮುಂದೆ ಬಂದ. ಅದೊಂದು ದಿನ ಅವರಿಬ್ಬರೂ ನೊಯಾ¾ನ್‌ನ ಮನೆಯಲ್ಲಿ ಭೇಟಿಯಾಗುವುದೆಂದೂ ನಿರ್ಧರಿಸಲಾಯಿತು. ಹೇಳಿದ ದಿನ, ಹೇಳಿದ್ದ ಸಮಯಕ್ಕೆ ಸರಿಯಾಗಿ ಬೆಗಲೊವ್‌ ಬಂದ. ಅವನನ್ನು ಬರಮಾಡಿಕೊಳ್ಳಲೆಂದು ಬಾಗಿಲು ತೆರೆದಾಗ ಬೆಗಲೊವ್‌ ಜೊತೆಗೆ ಒಂದು ನಾಯಿಯೂ ಮನೆಯೊಳಗೆ ಬಂತು.

ನೊಯಾ¾ನ್‌ ಮತ್ತು ಬೆಗಲೊವ್‌ ತಮ್ಮ ಪ್ರಾಜೆಕ್ಟ್ ಕುರಿತು ಗಹನ ಚರ್ಚೆ ನಡೆಸುತ್ತಿದ್ದಾಗ ಆ ನಾಯಿ ಪಡಸಾಲೆಯಲ್ಲಿ ಅತ್ತಿತ್ತ ಸುಳಿಯಿತು, ಸೋಫಾ – ಕುರ್ಚಿಗಳನ್ನು ಹತ್ತಿಳಿಯಿತು, ಮಲಗಿತು, ಎದ್ದು ಕೂತಿತು, ಒಂದಷ್ಟು ಬೊಗಳಿತು. ಅದೆಲ್ಲದರಿಂದ ಕಿರಿಕಿರಿಯಾದರೂ ನೊಯಾ¾ನ್‌, ಬಂಡವಾಳ ಹೂಡುತ್ತಿರುವವನ ನಾಯಿ ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಬೇಕಾಯಿತು. ಇಬ್ಬರ ನಡುನ ಚರ್ಚೆ-ಮಾತುಕತೆ ಎಲ್ಲ ಮುಗಿದ ಮೇಲೆ ಬೆಗಲೊವ್‌, ನೊಯಾ¾ನ್‌ನ ಕೈಕುಲುಕಿ ಹೊರಡಲನುವಾದ. ಆತ ಮನೆಯಿಂದ ಹೊರಹೋಗುವಾಗಲೂ ನಾಯಿ ಮನೆಯೊಳಗೇ ಬೆಚ್ಚನೆ ಕೂತಿತ್ತು. “ಕ್ಷಮಿಸಿ ಬೆಗಲೊವ್‌, ನೀವು ನಿಮ್ಮ ನಾಯಿಯನ್ನು ಮರೆತು ಹೋಗುತ್ತಿದ್ದೀರಿ ಅಂತ ಕಾಣುತ್ತೆ’ ಎಂದ ನೊಯಾ¾ನ್‌ ಎಲ್ಲ ಸೌಜನ್ಯದೊಂದಿಗೆ. “ನಾಯಿ? ನನ್ನ ನಾಯಿ? ಅದು ನಿಮ್ಮದು ಅಂತ ನಾನು ಯೋಚಿಸಿದ್ದೆ ‘ ಎಂದ ಬೆಗಲೊವ್‌.

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next