ಬೆಂಗಳೂರು: ಜಮ್ಮು ಕಾಶ್ಮೀರದ ಅಮರನಾಥ ಗುಹೆ ಇರುವ ಪ್ರದೇಶದಲ್ಲಿ ಶುಕ್ರವಾರ ಮೇಘಸ್ಫೋಟ ಸಂಭವಿಸಿ ಇದುವರೆಗೆ 16 ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಿಂದಲೂ ನೂರಕ್ಕೂ ಹೆಚ್ಚು ಮಂದಿ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಆರ್.ಟಿ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಪ್ರತಿ ವರ್ಷ ಕನ್ನಡಿಗರು ಯಾತ್ರೆಗೆ ಹೋಗುತ್ತಾರೆ. ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯದ ನೂರಕ್ಕೂ ಹೆಚ್ಚು ಜನ ಯಾತ್ರೆಯಲ್ಲಿದ್ದಾರೆ. ಬಹುತೇಕ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದರು.
ನಾವು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜತೆ ಸಂಪರ್ಕದಲ್ಲಿದ್ದೇವೆ. ನಾವು ತುರ್ತು ಹೆಲ್ಪ್‌ಲೈನ್ ತೆರೆದಿದ್ದೇವೆ. ಹೆಲ್ಪ್‌ಲೈನ್ ಗೆ ಹದಿನೈದು ಇಪ್ಪತ್ತು ಜನ ಈಗಾಗಲೇ ಕರೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದೇವೆ. ನಮ್ಮ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಏನೇ ಮಾಹಿತಿ, ಸುದ್ದಿ ಇದ್ದರೂ ನಮ್ಮ ಹೆಲ್ಪ್‌ಲೈನ್ ಗೆ ಕರೆ ಮಾಡಲಿ. ಕೂಡಲೇ ರಕ್ಷಣಾ ಕಾರ್ಯ ಮಾಡುತ್ತೇವೆ ಎಂದರು.
ಇದನ್ನೂ ಓದಿ:Updates: ಅಮರನಾಥ ಮೇಘಸ್ಫೋಟ:15,000 ಯಾತ್ರಾರ್ಥಿಗಳ ರಕ್ಷಣೆ, 40ಕ್ಕೂ ಹೆಚ್ಚು ಮಂದಿ ನಾಪತ್ತೆ
ರಾಜ್ಯದ ಹಲವೆಡೆ ಮಳೆ ಅನಾಹುತ ವಿಚಾರವಾಗಿ ಮಾತನಾಡಿದ ಸಿಎಂ, ಮಳೆ ಹಾನಿ ಬಗ್ಗೆ ನಿನ್ನೆ ಸಭೆ ನಡೆಸಿದ್ದೇನೆ. ಕೆಲವು ಕಡೆ ಸ್ವಲ್ಪ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವೆಡೆ ಇನ್ನೂ ಎರಡು ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಇದರ ಅನುಗುಣವಾಗಿ ಕಾರ್ಯಾಚರಣೆ ಮಾಡುತ್ತೇವೆ ಎಂದರು.