ಬೀದರ: ಬೀದರ ನಗರದ ಎರಡು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಲಸಿಕಾ ಕೇಂದ್ರವಾಗಿ ಗುರುತಿಸಲಾಗಿದ್ದು, ಇದರಲ್ಲಿ ನಗರದ ಪ್ರತಿಷ್ಠಿತ ಗುರುನಾನಕ್ ಆಸ್ಪತ್ರೆಯೂ ಸೇರಿದೆ. ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ರಹೀಮ್ ಖಾನ್ ಸಲಹೆ ನೀಡಿದರು. ಜಿಲ್ಲೆಯಲ್ಲಿ 2ನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ನಗರದ ಗುರುನಾನಕ್ ಆಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಗುರುನಾನಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ಆರಂಭಿಸಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ವಿರುದ್ಧ ಗೆಲುವು ಸಾಧಿಸಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಕೋವಿಡ್ ಸಂಪೂರ್ಣ ತೊಲಗುವವರೆಗೂ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ಆಸ್ಪತ್ರೆಯಲ್ಲಿ ಆರಂಭಿಸಿರುವ ಲಸಿಕಾ ಕೇಂದ್ರ ಹಾಗೂ ನಿಗಾ ಘಟಕದ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ಕೋವಿಶೀಲ್ಡ್ ಲಸಿಕೆ ಬಗ್ಗೆ ಯಾರು ಕೂಡ ಆತಂಕ ಪಡಬಾರದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.84 ಆರೋಗ್ಯ ಸಿಬ್ಬಂದಿ, ಶೇ.67 ಮುಂಚೂಣಿ ಕಾರ್ಯಕರ್ತರು ಕೋವಿಶೀಲ್ಡ್ ಪಡೆದಿದ್ದಾರೆ. ಹೀಗಾಗಿ ಸಾರ್ವಜನಿಕರು, ಹಿರಿಯ ನಾಗರಿಕರು ಆತಂಕ ಪಡದೇ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.
ಸಂಸ್ಥೆ ಸಿಬ್ಬಂದಿ ಉಚಿತ ಲಸಿಕೆ: ಗುರುನಾನಕ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಗುರುದ್ವಾರಾ ಸಿಬ್ಬಂದಿ ಮತ್ತು ಗುರುನಾನಕ್ ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೆ ಸಂಸ್ಥೆ ಪರವಾಗಿ ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ನೆರೆ ರಾಜ್ಯಗಳಿಗೆ ಹೋಗುವುದು ತಪ್ಪಿಸಲು ಗುರುನಾನಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ, ಕ್ಯಾಟ್ ಲ್ಯಾಬ್ ಸೇರಿದಂತೆ ಅಗತ್ಯ ಅತ್ಯಾಧುನಿಕ ವೈದ್ಯಕೀಯ ಸೌಕರ್ಯ ಕಲ್ಪಿಸಲಾಗಿದೆ. ಮಾ.3ರಂದು ನ್ಯೂರೊ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಮಾತನಾಡಿ, ಮಾ.1ರಿಂದ ಎರಡನೇ ಹಂತದ ಕೋವಿಡ್ ಲಸಿಕಾ ವಿತರಣಾ ಅಭಿಯಾನ ಆರಂಭವಾಗಿದೆ. ಬೀದರ ಜಿಲ್ಲೆಯಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ, ಬ್ರಿಮ್ಸ್, ಓಲ್ಡ್ ಸಿಟಿಯ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಔರಾದ, ಭಾಲ್ಕಿ, ಹುಮನಾಬಾದ ಮತ್ತು ಬಸವಕಲ್ಯಾಣ ತಾಲೂಕು ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಒಂದು ಡೋಸ್‌ಗೆ 250 ರೂ: ಒಟ್ಟು ನೋಂದಾಯಿತ 8 ಆಸ್ಪತ್ರೆಗಳಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದು. ಇಲ್ಲವೇ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಫೋಟೊ ಐಡಿಯೊಂದಿಗೆ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ ಒಂದು ಡೋಸ್‌ಗೆ 250 ರೂ. ಹಣ ನೀಡಿ ಲಸಿಕೆ ತೆಗೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಲ್ಲಿ 100 ರೂ. ಸೇವಾ ಶುಲ್ಕ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ನಿಶಾ ಕೌರ್, ಡಾ| ಲಿಂಗರಾಜ ಕಡಾಡಿ, ಡಾ| ಕೊರವಾರ್, ಆರ್‌ಎಚ್‌ಒ ಡಾ| ಮಹೇಶ ಬಿರಾದಾರ, ಜಿಲ್ಲಾ ಆರೋಗ್ಯ ಶಿಕ್ಷಣ ಅ ಧಿಕಾರಿ ಸಂಗಪ್ಪ ಕಾಂಬಳೆ ಸೇರಿದಂತೆ ಇತರರು ಇದ್ದರು.
ಲಸಿಕೆ ಪಡೆದ ಡಾ| ಬಲಬೀರಸಿಂಗ್
ಲಸಿಕಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ 60 ವರ್ಷ ದಾಟಿರುವ ಗುರುನಾನಕ್ ದೇವ ಪ್ರಬಂಧಕ ಕಮಿಟಿ ಹಾಗೂ ಗುರುನಾನಕ್ ಝೀರಾ ಫೌಂಡೇಶನ್ ಅಧ್ಯಕ್ಷ ಡಾ| ಬಲಬೀರಸಿಂಗ್ ಕೋವಿಶೀಲ್ಡ್ ಲಸಿಕೆ ಪಡೆಯುವ ಮೂಲಕ ಹಿರಿಯ ನಾಗರಿಕರಿಗೆ ಮಾದರಿ ಸಂದೇಶ ನೀಡಿದರು. ಪ್ರಬಂಧಕ ಕಮಿಟಿ ಕಾರ್ಯನಿರ್ವಾಹಕ ಸದಸ್ಯ ಮನಪ್ರೀತಸಿಂಗ್ ಬಂಟಿ ಕೂಡ ಇದೇ ವೇಳೆ ಲಸಿಕೆ ಪಡೆದರು.