ಗಜೇಂದ್ರಗಡ: ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ತರಕಾರಿ ಮಾರುಕಟ್ಟೆಯಲ್ಲಿ ಹಸಿರು ಸೊಪ್ಪು ಹೆಚ್ಚಿಗೆ ಬರುತ್ತಿದೆ. ದುಬಾರಿ ದರದಲ್ಲಿದ್ದ ಕೋತಂಬರಿ, ಮೆಂತೆ, ಮೂಲಂಗಿ, ಪಾಲಕ್ ಸೇರಿದಂತೆ ವಿವಿಧ ಸೊಪ್ಪುಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭಿಸುತ್ತಿದೆ.
ಗೊಗೇರಿ, ಕೊಡಗಾನೂರ, ವೀರಾಪುರ, ಗೌಡಗೇರಿ, ಚಿಲಝರಿ ಸೇರಿದಂತೆ ಹಲವೆಡೆ ಸೊಪ್ಪನ್ನು ಬೆಳೆಯಲಾಗುತ್ತಿದೆ. ತಾಲೂಕಿನ ಹೊರ ಭಾಗದಿಂದಲೂ ಸೊಪ್ಪು ನಗರಕ್ಕೆ ಬರುತ್ತಿದೆ. ಮಳೆಗಾಲ ವಾದ್ದರಿಂದ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ರೈತರು ಸೊಪ್ಪನ್ನೇ ಹೆಚ್ಚು ಬೆಳೆಯುತ್ತಿದ್ದಾರೆ.
ಉಳಿದ ಅವಧಿಯಲ್ಲಿ ಸಿಗದೇ ಇರುವ ಅನೇಕ ಸೊಪ್ಪುಗಳು ಮುಂಗಾರು ಸಮಯದಲ್ಲಿ ಸಿಗುತ್ತವೆ. ಮಾಮೂಲಿ ಸಮಯದಲ್ಲಿ ಸಿಗದ ಹಕ್ಕರಕಿಯಂಥ ಸೊಪ್ಪು ಸಹ ಮಾರುಕಟ್ಟೆಗೆ ಬರುತ್ತಿದೆ. ಹಕ್ಕರಕಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಜನರು ಹುಡುಕಿ ತೆಗೆದುಕೊಂಡು ಹೋಗುತ್ತಾರೆ.
ಏಪ್ರಿಲ್-ಮೇ ತಿಂಗಳಲ್ಲಿ ಕಿರಕಸಾಲಿ ಒಂದು ಸಿವುಡಿಗೆ 10 ರೂ., ಮೂಲಂಗಿ 8ರೂ., ಕೊತ್ತಂಬರಿ 20 ರೂ., ಮೆಂತೆ 10 ರೂ., ಪುಂಡಿ ಪಲ್ಲೆ 8 ರೂ. ಹೀಗೆ ಸೊಪ್ಪುಗಳ ಬೆಲೆ ಏರುಮುಖ ಮಾಡಿತ್ತು. ಆದರೆ ಜುಲೈ ತಿಂಗಳಿಂದ ಪಾಲಕ್, ಮೆಂತೆ, ಮೂಲಂಗಿ, ಕಿರಕಸಾಲಿ, ಕೊತ್ತಂಬರಿ, ಪುಂಡಿಪಲ್ಲೆ, ರಾಜಗಿರಿ, ಹುಣಸಿಕ, ಸಬ್ಬಸಗಿ, ಹಕ್ಕರಕಿ, ಕರಿಬೇವು, ಪುದಿನಾ ಸೊಪ್ಪುಗಳು ಇದೀಗ 10 ರೂ. ನೀಡಿದರೆ ಎರಡರಿಂದ ಮೂರು ಸಿವುಡು (ಕಟ್ಟು) ಮಾರಾಟವಾಗುತ್ತಿದೆ.
ಪಟ್ಟಣದ ತರಕಾರಿ ಮಾರುಕಟ್ಟೆ ಸೇರಿ ಅಂಬೇಡ್ಕರ್ ವೃತ್ತ ಬಳಿಯ ಜೋಡು ರಸ್ತೆ ಪಕ್ಕದಲ್ಲಿ ಗ್ರಾಮೀಣ ಭಾಗದಿಂದ ಬರುವ ರೈತರು ತರಕಾರಿ ಸೊಪ್ಪನ್ನು ಬೆಳ್ಳಂ ಬೆಳಗ್ಗೆ ಮಾರಾಟ ಮಾಡಲು ತರುತ್ತಿದ್ದಾರೆ.