Advertisement

ಪ್ರತಿ ಶನಿವಾರ ಅಹವಾಲು ಸ್ವೀಕಾರ: ಖಾದರ್‌

10:52 AM Aug 05, 2018 | Team Udayavani |

ಉರ್ವಸ್ಟೋರ್‌: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅರ್ಜಿಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಮಧ್ಯವರ್ತಿಗಳಿಂದ ತೊಂದರೆ ಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಯಲ್ಲಿ ಸೆಪ್ಟಂಬರ್‌ ತಿಂಗಳಿನಿಂದ ಪ್ರತಿ ಶನಿವಾರ ‘ಜನ ಸಾಮಾನ್ಯರ ಬಳಿಗೆ ಮುಡಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಮುಡಾ ಕಚೇರಿಯಲ್ಲಿ ನಡೆದ ಮುಡಾ ಅದಾಲತ್‌ ಹಾಗೂ ಅಹವಾಲು ಸ್ವೀಕಾರ ಸಭೆಯ ಬಳಿಕ ಅವರು ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಬಜಪೆ, ಮೂಲ್ಕಿ, ಸುರತ್ಕಲ್‌ ಹಾಗೂ ಉಳ್ಳಾಲದಲ್ಲಿ ಪ್ರತಿ ಶನಿವಾರ ಅಂದರೆ ತಿಂಗಳ ನಾಲ್ಕು ಶನಿವಾರ ತಲಾ ಒಂದೊಂದು ಹೋಬಳಿಯಂತೆ ಮುಡಾ ಅಧಿಕಾರಿಗಳ ತಂಡ ತೆರಳಿ ಸ್ಥಳದಲ್ಲೇ ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಅನಂತರ ಪರಿಶೀಲನೆ ನಡೆಸಿ ಬಳಿಕ ಮೂರೇ ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗುವಂತೆ ನೋಡಿಕೊಳ್ಳಲಾಗುವುದು. ಜತೆಗೆ ಪ್ರತಿ ಆರು ತಿಂಗಳಿಗೊಮ್ಮೆ ಮುಡಾ ಕಚೇರಿಯಲ್ಲಿ ಅದಾಲತ್‌ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಡೆಯಲು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮೂಡಾ ಆಯುಕ್ತ ಶ್ರೀಕಾಂತ್‌ ರಾವ್‌, ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಮತ್ತಿತರರು ಉಪಸ್ಥಿತರಿದ್ದರು. 

ರಾಜ್ಯದಲ್ಲೇ ಮೊದಲ ಬಾರಿಗೆ ಮುಡಾ ಅದಾಲತ್‌
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಮುಡಾ ಅದಾಲತ್‌ನ್ನು ಶನಿವಾರ ನಡೆಸಲಾಗಿದೆ. ಸ್ವೀಕರಿಸಲಾದ ಒಟ್ಟು 116 ಪ್ರಕರಣಗಳಲ್ಲಿ 77 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. 40ಕ್ಕೂ ಹೆಚ್ಚು ಪ್ರಕರಣಗಳನ್ನು ಕಾಲ ಮಿತಿಯೊಳಗೆ ಪರಿಹರಿಸಲು ಸೂಚನೆ ನೀಡಲಾಗಿದೆ. ಮಿಕ್ಕ ಕೆಲ ಪ್ರಕರಣಗಳಲ್ಲಿ ಅರ್ಜಿದಾರರಿಂದಲೇ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದಿರುವುದರಿಂದ ಅವುಗಳನ್ನು ಕಾಲ ಮಿತಿಯೊಳಗೆ ಬಗೆಹರಿಸಲು ಸೂಚಿಸಲಾಗಿದೆ. ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಕಾಸ್‌ ನೋಟೀಸ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಲೇಔಟ್‌ ರೂಲ್ಸ್‌ ಅಪ್ರೂವಲ್ ಗೆ ಸಂಬಂಧಿಸಿ ಶೀಘ್ರವೇ ನೀತಿ ನಿರೂಪಿಸಲ್ಪಡುವುದರಿಂದ ಹಲವು ಸಮಸ್ಯೆಗಳು ಪರಿಹಾರಗೊಳ್ಳಲಿವೆ ಎಂದು ಸಚಿವ ಖಾದರ್‌ ತಿಳಿಸಿದರು

ನೇರವಾಗಿ ಆಯುಕ್ತರನ್ನೇ ಭೇಟಿಯಾಗಿ
ಇದೇ ವೇಳೆ ಮುಡಾ ಕಚೇರಿ ಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾ ಗುತ್ತಿ ರುವ ಸಮಸ್ಯೆ ಬಗ್ಗೆ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಏಕ ನಿವೇಶನ, ವಲಯ ದೃಢೀಕರಣ ಪತ್ರ ಸೇರಿದಂತೆ ಮುಡಾಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳಿಗೆ ಅರ್ಜಿದಾರರು ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಆಯುಕ್ತರನ್ನೇ ಭೇಟಿಯಾಗಬಹುದು. ಒಂದು ವೇಳೆ ಅವರಿಂದ ಕೆಲಸ ಸಾಧ್ಯವಾಗದಿದ್ದಲ್ಲಿ ಜಿಲ್ಲಾಧಿಕಾರಿ ಅಥವಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್‌ ಅವರು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next