ಮಂಗಳೂರು: ಇಂದು ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಕತ್ತಿ, ತಲ್ವಾರ್ ಅನ್ನು ಇಟ್ಟುಕೊಳ್ಳಬೇಕಾಗಿದೆ. ಆಯುಧವೆಂದರೆ ಪೆನ್ನು, ಪುಸ್ತಕಗಳಲ್ಲ, ಕತ್ತಿ, ಭರ್ಜಿ, ತಲ್ವಾರ್ ಆಯುಧಗಳಾಗಿವೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮತ್ತೊಂದೆಡೆ ಉಸ್ತುವಾರಿ ಸಚಿವ ರಮಾನಾಥ ರೈ ಮುತಾಲಿಕ್ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಆವರಣದಲ್ಲಿ ಶ್ರೀರಾಮ ಸೇನೆ ಮತ್ತು ಮಹಿಳಾ ಘಟಕ ದುರ್ಗಾ ಸೇನೆ ವತಿಯಿಂದ ನಡೆದ ಮಾತೃಪೂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಹೆದರಿಕೆ ಇಲ್ಲದೇ ಪ್ರತಿಯೊಬ್ಬ ಹಿಂದುಗಳೂ ದೇಶ(ಸ್ವ) ರಕ್ಷಣೆಗೋಸ್ಕರ ಕತ್ತಿ, ತಲ್ವಾರ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು.
ಯಾವನು ಅವನು ಮುತಾಲಿಕ್: ರೈ ಆಕ್ರೋಶ
ಪ್ರಮೋದ್ ಮುತಾಲಿಕ್ ಅವರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ರಮಾನಾಥ್ ರೈ, ಯಾವನು ಅವನು ಮುತಾಲಿಕ್, ಅವನೊಬ್ಬ ದಾರಿಹೋಕ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಸುಲಭದಲ್ಲಿ ನಾಯಕನಾಗಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇವರಿಗೇನು ಹಿಂದು ಧರ್ಮದ ಗುತ್ತಿಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.