ಮುಂಬಯಿ, ಆ. 5: ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಒಂದುಸೇರಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಮಾಡಬೇಕಾದ ಅಗತ್ಯವಿದೆ. ಇಂದು ಅನೇಕ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲು ತುಂಬಾ ಕಷ್ಟವಾ ಗುತ್ತಿದೆ. ಅಂಥವರನ್ನು ಗುರುತಿಸುವ ಕೆಲಸ ಸಂಘ-ಸಂಸ್ಥೆಗಳಿಂದ ಆಗಬೇಕು. ಮುಲುಂಡ್ ಬಂಟ್ಸ್‌ನ ಕೆಲಸಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಂಟರ ಸಂಘ ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ನುಡಿದರು.
ಆ. 4ರಂದು ಮುಲುಂಡ್ ಪೂರ್ವದ ಬಾನ್ಸೂರಿ ಹೊಟೇಲ್ನ ಸಿಂಪೊನಿಯಾ ಪ್ರೈ ಸಭಾಗೃಹದಲ್ಲಿ ಜರಗಿದ ಮುಲುಂಡ್ ಬಂಟ್ಸ್‌ನ ವಾರ್ಷಿಕ ಶೈಕ್ಷಣಿಕ ನಿಧಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಆರ್ಥಿಕ ಸಹಾಯ ಪಡೆದ ಮಕ್ಕಳು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು. ಪ್ರತಿಯೋರ್ವ ದಾನಿಯೂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂದು ಸಹಾಯ ಮಾಡುತ್ತಾರೆ. ಅದರ ಸದುಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ವಾಶಿಯ ಸುಪ್ರೀ ಹೆರಿಟೇಜ್ ಹೊಟೇಲ್ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಶಿವರಾಮ ಜಿ. ಶೆಟ್ಟಿ ಅವರು ಮಾತನಾಡಿ, ಸಂಘ-ಸಂಸ್ಥೆಗಳು ಹೆಚ್ಚಾದಂತೆ ಅದರ ಪ್ರಯೋಜನ ಸಮಾಜದ ಮಕ್ಕಳಿಗೆ ದೊರೆಯುತ್ತದೆ. ಮುಲುಂಡ್ ಬಂಟ್ಸ್ ಎಂಬುವುದು ನನ್ನ ಮನೆಯಿದ್ದಂತೆ. ಇಲ್ಲಿರುವ ಎಲ್ಲರೂ ನಮ್ಮ ಸ್ನೇಹಿತರು ಹಾಗೂ ನಾನು ಇದರ ಸದಸ್ಯನೂ ಹೌದು. ಸಂಘದ ಕಾರ್ಯಚಟುವಟಿಕೆಗಳನ್ನು ನೋಡುವಾಗ ಸಂತೋಷವಾಗುತ್ತಿದೆ. ಮಕ್ಕಳು ಪ್ರಯತ್ನಪಟ್ಟರೆ ಅವರ ಜೀವನದಲ್ಲಿ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂದರು.
ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭವನ್ನು ಅತಿಥಿ- ಗಣ್ಯರು ಉದ್ಘಾಟಿಸಿದರು. ಮುಲುಂಡ್ ಬಂಟ್ಸ್‌ನ ಗೌರವ ಕೋಶಾಧಿಕಾರಿ ರತ್ನಾಕರ ವೈ. ಶೆಟ್ಟಿ ಮತ್ತು ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷರು ಮತ್ತು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಎಂ. ಅಡ್ಯಂತಾಯ ಅವರು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಶೈಕ್ಷಣಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ರೂಪಾ ಪ್ರಕಾಶ್ ಶೆಟ್ಟಿ ಪ್ರಾರ್ಥನೆಗೈದರು. ವೇದಿಕೆಯಲ್ಲಿ ಸಂಸ್ಥೆಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಎಂ. ಅಡ್ಯಂತಾಯ, ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸ ಶೆಟ್ಟಿ, ಗೌರವ ಕೋಶಾಧಿಕಾರಿ ರತ್ನಾಕರ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ವೇಣುಗೋಪಾಲ್ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಆರ್. ಚೌಟ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿಕಾ ಶೆಟ್ಟಿ ಅವರು ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ವೇಣುಗೋಪಾಲ್ ಎಂ. ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಟ್ರಸ್ಟಿಗಳಾದ ಡಾ| ಸತ್ಯಪ್ರಕಾಶ್ ಶೆಟ್ಟಿ, ಸುರೇಶ್ ಬಿ. ಶೆಟ್ಟಿ, ಎಚ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದರು. ಸದಸ್ಯ ಬಾಂಧವರ ನೂರಾರು ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಅಲ್ಲದೆ ಅರ್ಹ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಸ್ಥೆಯು ಮಹಿಳಾ ವಿಭಾಗ, ಯುವ ವಿಭಾಗ ಇನ್ನಿತರ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮುಲುಂಡ್ ಬಂಟ್ಸ್ ಅನೇಕ ವರ್ಷಗಳಿಂದ ಶೈಕ್ಷಣಿಕ ಸಹಾಯ ಮಾಡುತ್ತಾ ಬಂದಿದೆ. ಈ ವರ್ಷವೂ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅನಂತ ಎಂ. ಅಡ್ಯಂತಾಯ ಅವರ ನೇತೃತ್ವದಲ್ಲಿ ನೂರಾರು ಮಕ್ಕಳಿಗೆ ಶೈಕ್ಷಣಿಕ ಸಹಾಯ ಮತ್ತು ದತ್ತು ಸ್ವೀಕಾರ ಮಾಡುತ್ತಿದ್ದು, ಇದಕ್ಕೆ ದಾನಿಗಳಿಂದ ಉತ್ತಮ ಸಹಕಾರ ಲಭಿಸಿದೆ. ಇಲ್ಲಿ ಧನ ಸಹಾಯ ಪಡೆದ ಮಕ್ಕಳು ಮುಂದೆ ತಾವು ಇತರರಿಗೆ ಸಹಾಯ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ.-
ಪಲಿಮಾರು ವಸಂತ್ ಎನ್. ಶೆಟ್ಟಿ, ಅಧ್ಯಕ್ಷರು, ಮುಲುಂಡ್ ಬಂಟ್ಸ್
ಚಿತ್ರ-ವರದಿ : ಸುಭಾಷ್ ಶಿರಿಯಾ