ಬನ್ನೂರು: 6 ರಿಂದ 14 ವರ್ಷ ಒಳಪಟ್ಟ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಶಾಲೆಯ ಶಿಕ್ಷಕರು ಹೆಚ್ಚಿನ ಕಾಳಜಿವಹಿಸುವ ಮೂಲಕ ಸಮುದಾಯದ ಮುಖಂಡರು, ಸಂಘ-ಸಂಸ್ಥೆಯ ಮುಖ್ಯಸ್ಥರು, ಪಾಲಕರ ಸಹಕಾರದೊಂದಿಗೆ ಪ್ರತಿ ಮಗುವನ್ನು ಶಾಲೆಗೆ ಸೇರಿಸಿ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿ ಪುಷ್ಪಲತಾ ಹೇಳಿದರು.
ಪಟ್ಟಣದ ಸಮೀಪದ ಬೀಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸಭೆಯಲ್ಲಿ 2017-18ನೇ ಸಾಲಿನ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಮತ್ತು ಶೈಕ್ಷಣಿಕ ತಯಾರಿ ಪರಿಶೀಲನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಇದ್ದ ಶಿಕ್ಷಣದ ವ್ಯವಸ್ಥೆ ಇಂದು ಸಂಪೂರ್ಣವಾಗಿ ಬದಲಾಗುತ್ತಿದ್ದು, ಸರ್ಕಾರದ ಪ್ರತಿ ಮಗುವನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಕ್ಷರದಾಸೋಹ, ಕ್ಷೀರಭಾಗ್ಯ, ಸಮವಸ್ತ್ರ, ಶೂಭಾಗ್ಯ, ಉಚಿತ ಸೈಕಲ್, ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದು, ಇವುಗಳ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡಬೇಕೆಂದು ತಿಳಿಸಿದರು.
ಬೀಡನಹಳ್ಳಿ ಎಸ್‌ಡಿಎಂಸಿ ಅಧ್ಯಕ್ಷ ದಾಸೇಗೌಡ, ತಲಕಾಡು ಶಿಕ್ಷಣ ಸಂಯೋಜನಾಧಿಕಾರಿ ವೀರಭದ್ರಯ್ಯ, ಬನ್ನೂರು ಹೋಬಳಿ ಶಿಕ್ಷಣ ಸಂಯೋಜಕ ನಂಜುಂಡಸ್ವಾಮಿ, ಬೀಡನಹಳ್ಳಿ ಗ್ರಾಪಂ ಸದಸ್ಯ ತಮ್ಮೇಗೌಡ, ವೆಂಕಟೇಗೌಡ, ಗ್ರಾಮದ ಯಜಮಾನರಾದ ನವೀನ್ ಪ್ರಕಾಶ್, ಗ್ರಾಮದ ಮುಖಂಡ ಸಣ್ಣೇಗೌಡ, ಉಮೇಶ್, ಗೌರಮ್ಮ ಇತರರು ಇದ್ದರು.